ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಡುಗಡೆಯ ಆರಂಭದಲ್ಲಿ ಸಾಧಾರಣ ಪ್ರತಿಕ್ರಿಯೆ ಪಡೆದಿದ್ದ ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್’ ಸಿನಿಮಾ ಇದೀಗ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಚಿತ್ರ ಭಾರತದ ಮಾರುಕಟ್ಟೆಯಲ್ಲಿ 500 ಕೋಟಿ ರೂಪಾಯಿ ಗಡಿ ದಾಟಿರುವುದು ಬಾಲಿವುಡ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಮೂಲಕ ರಣವೀರ್ ಸಿಂಗ್ ಅವರ ವೃತ್ತಿಜೀವನದ ಪ್ರಮುಖ ಹಿಟ್‌ಗಳಲ್ಲಿ ಒಂದಾಗಿ ‘ಧುರಂಧರ್’ ಹೊರಹೊಮ್ಮಿದೆ.
ಚಿತ್ರ ಬಿಡುಗಡೆಗೊಂಡು 17 ದಿನಗಳು ಕಳೆದರೂ ಸಹ ಇದರ ವೇಗ ಕಡಿಮೆಯಾಗಿಲ್ಲ. ವಾರಾಂತ್ಯ ಮಾತ್ರವಲ್ಲದೆ ಸಾಮಾನ್ಯ ದಿನಗಳಲ್ಲೂ ಚಿತ್ರ 20 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುತ್ತಿರುವುದು ಟ್ರೇಡ್ ವಲಯವನ್ನು ಅಚ್ಚರಿಗೊಳಿಸಿದೆ. ಮೂರನೇ ಶನಿವಾರ, ಅಂದರೆ 16ನೇ ದಿನ, ಸಿನಿಮಾ ಅಂದಾಜು 33.5 ಕೋಟಿ ರೂಪಾಯಿ ಗಳಿಸಿದ್ದು, ಆರಂಭಿಕ ವರದಿಗಳ ಪ್ರಕಾರ ದೇಶೀಯ ಒಟ್ಟು ಕಲೆಕ್ಷನ್ 516 ಕೋಟಿ ರೂಪಾಯಿ ಮೀರಿದೆ. ಭಾನುವಾರವೂ ಉತ್ತಮ ಗಳಿಕೆಯ ನಿರೀಕ್ಷೆಯಿದೆ.
ಇಂದಿಗೂ ಅನೇಕ ನಗರಗಳಲ್ಲಿ ‘ಧುರಂಧರ್’ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದು, ಮುಂದಿನ ದಿನಗಳಲ್ಲಿ 600 ಕೋಟಿ ರೂಪಾಯಿ ಗಡಿ ದಾಟುವ ವಿಶ್ವಾಸ ವ್ಯಕ್ತವಾಗಿದೆ. ಹೊಸ ಚಿತ್ರಗಳ ಬಿಡುಗಡೆಯ ನಡುವೆಯೂ ‘ಧುರಂಧರ್’ ಪ್ರಭಾವ ಕುಗ್ಗಿಲ್ಲ. ಶೀಘ್ರದಲ್ಲೇ ‘ಗದರ್ 2’, ‘ಪಠಾಣ್’ ಹಾಗೂ ‘ಅನಿಮಲ್’ ಸಿನಿಮಾಗಳ ದಾಖಲೆಯನ್ನು ಹಿಂದಿಕ್ಕುವ ದಿಕ್ಕಿನಲ್ಲಿ ಈ ಸಿನಿಮಾ ಸಾಗುತ್ತಿದೆ.

