Sunday, December 21, 2025

ಮಕ್ಕಳ ಚೀರಾಟ ಕೇಳಿದ್ರೆ ಕೋಪ ಬರುತ್ತೆ!: ವಿಕೃತ ಮನಸ್ಸಿನ ಆರೋಪಿ ರಂಜನ್ ಅಸಲಿ ಮುಖವೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ತ್ಯಾಗರಾಜನಗರದಲ್ಲಿ ಪುಟಾಣಿ ಮಕ್ಕಳ ಮೇಲೆ ನಡೆದ ಅಮಾನವೀಯ ಹಲ್ಲೆ ಪ್ರಕರಣ ಈಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ಐದು ವರ್ಷದ ಮಗುವನ್ನು ಅತ್ಯಂತ ಕ್ರೂರವಾಗಿ ಕಾಲಿನಿಂದ ಒದ್ದಿದ್ದ ಆರೋಪಿ ರಂಜನ್ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಆತ ತಪ್ಪಿಸಿಕೊಳ್ಳಲು ‘ಮಾನಸಿಕ ಕಾಯಿಲೆ’ಯ ನಾಟಕವಾಡುತ್ತಿದ್ದಾನಾ ಎಂಬ ಅನುಮಾನ ಮೂಡಿದೆ.

ಪ್ರಸ್ತುತ ಆರೋಪಿ ರಂಜನ್ ತಮಿಳುನಾಡಿನ ಮದುರೈನಲ್ಲಿ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಪೊಲೀಸರು ಆತನ ಪೋಷಕರನ್ನು ಸಂಪರ್ಕಿಸಿದಾಗ, “ರಂಜನ್‌ಗೆ ಮಾನಸಿಕ ಸಮಸ್ಯೆ ಇದೆ, ಅದಕ್ಕಾಗಿ ಚಿಕಿತ್ಸೆ ಕೊಡಿಸಲು ಇಲ್ಲಿಗೆ ಬಂದಿದ್ದೇವೆ” ಎಂಬ ಸಮರ್ಥನೆ ನೀಡಿದ್ದಾರೆ. ಆದರೆ, ಚಿಕಿತ್ಸೆಗೆ ಸಂಬಂಧಿಸಿದ ಯಾವುದೇ ಅಧಿಕೃತ ದಾಖಲೆಗಳನ್ನು ನೀಡಲು ಪೋಷಕರು ವಿಫಲರಾಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಕಳೆದ ಭಾನುವಾರ ಪೊಲೀಸರು ಪ್ರಾಥಮಿಕ ವಿಚಾರಣೆ ನಡೆಸಿದಾಗ ರಂಜನ್ ತನ್ನ ವಿಕೃತಿಯನ್ನು ಒಪ್ಪಿಕೊಂಡಿದ್ದಾನೆ. “ಮಕ್ಕಳನ್ನು ನೋಡಿದರೆ, ಅವರ ಧ್ವನಿ ಕೇಳಿದರೆ ನನಗೆ ಕಿರಿಕಿರಿ ಉಂಟಾಗುತ್ತದೆ. ವಿಪರೀತ ಕೋಪ ಬರುತ್ತದೆ, ಅದಕ್ಕೇ ಹೊಡೆದೆ” ಎಂದು ಹೇಳಿಕೆ ನೀಡಿರುವುದು ಆತನ ವಿಕೃತ ಮನಸ್ಥಿತಿಯನ್ನು ಎತ್ತಿ ತೋರಿಸುತ್ತಿದೆ.

ಈಗಾಗಲೇ ನಾಲ್ವರು ಪೋಷಕರಿಂದ ಹೇಳಿಕೆ ಪಡೆದಿರುವ ಬನಶಂಕರಿ ಪೊಲೀಸರು, ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಆರೋಪಿ ಮಾನಸಿಕ ಅಸ್ವಸ್ಥ ಎಂದು ಹೇಳಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಯಾವೆಲ್ಲಾ ಕಾನೂನು ಸೆಕ್ಷನ್‌ಗಳನ್ನು ಹೇರಬಹುದು ಎಂಬ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯುತ್ತಿದ್ದಾರೆ. ಶೀಘ್ರದಲ್ಲೇ ಆತನನ್ನು ಬಂಧಿಸಿ, ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ತಜ್ಞ ವೈದ್ಯರಿಂದ ವೈದ್ಯಕೀಯ ತಪಾಸಣೆಗೆ ಒಳಪಡಿಸಲು ಪೊಲೀಸರು ನಿರ್ಧರಿಸಿದ್ದಾರೆ. ವೈದ್ಯರ ವರದಿ ಬಂದ ನಂತರವಷ್ಟೇ ಆತನಿಗೆ ಶಿಕ್ಷೆಯಾಗುತ್ತದೆಯೇ ಅಥವಾ ಮಾನಸಿಕ ಕೇಂದ್ರಕ್ಕೆ ಕಳುಹಿಸಲಾಗುತ್ತದೆಯೇ ಎಂಬುದು ಸ್ಪಷ್ಟವಾಗಲಿದೆ.

error: Content is protected !!