ಹೊಸದಿಗಂತ ಬೆಂಗಳೂರು
ಈಶಾನ್ಯ ಭಾರತದ ಕ್ರೀಡಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ಅಸ್ಸಾಂ ಸರ್ಕಾರ ಮುಂದಾಗಿದೆ. ಅಸ್ಸಾಂ ಸರ್ಕಾರದ ಕ್ರೀಡೆ ಮತ್ತು ಯುವ ಕಲ್ಯಾಣ ನಿರ್ದೇಶನಾಲಯ ಹಾಗೂ ಇನ್‌ಸ್ಪೈರ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ ಜಂಟಿಯಾಗಿ 2026ರ ಜನವರಿ 17ರಿಂದ 23ರವರೆಗೆ ಗುಹಾಟಿಯ ಸರೂಸಜಾಯಿ ಕ್ರೀಡಾಂಗಣದಲ್ಲಿ ಬೃಹತ್ ‘ಟೇಕ್ವಾಂಡೋ ಟ್ಯಾಲೆಂಟ್ ಐಡೆಂಟಿಫಿಕೇಶನ್ ಹಾಗೂ ಮಾಸ್ಟರ್‌ಕ್ಲಾಸ್’ ಕಾರ್ಯಕ್ರಮವನ್ನು ಆಯೋಜಿಸಿವೆ.
ಈ ಕಾರ್ಯಕ್ರಮದ ವಿಶೇಷವೆಂದರೆ, ಎರಡು ಬಾರಿ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ಆಗಿರುವ ಜೇಡ್ ಜೋನ್ಸ್ ಹಾಗೂ ವಿಶ್ವ ಮತ್ತು ಯುರೋಪಿಯನ್ ಚಾಂಪಿಯನ್ ಅಚಾಬ್ ಜೌವಾಡ್ ಅವರು ಸ್ವತಃ ಕ್ರೀಡಾಪಟುಗಳಿಗೆ ತರಬೇತಿ ನೀಡಲಿದ್ದಾರೆ. ಮೊದಲ ಬಾರಿಗೆ ಇಂತಹ ದಿಗ್ಗಜ ಕ್ರೀಡಾಪಟುಗಳು ಭಾರತದಲ್ಲಿ ತರಬೇತಿ ನೀಡುತ್ತಿರುವುದು ವಿಶೇಷ.
ಏಳು ದಿನಗಳ ಈ ತರಬೇತಿ ಶಿಬಿರವನ್ನು ಎರಡು ಪ್ರಮುಖ ಹಂತಗಳಲ್ಲಿ ವಿಂಗಡಿಸಲಾಗಿದೆ:
ಹಂತ 1 (ಜೂನ್ 17-18): ಪ್ರತಿಭಾವಂತ ಟೇಕ್ವಾಂಡೋ ಕ್ರೀಡಾಪಟುಗಳನ್ನು ಗುರುತಿಸುವ ‘ಟ್ಯಾಲೆಂಟ್ ಐಡೆಂಟಿಫಿಕೇಶನ್’ ಪ್ರಕ್ರಿಯೆ ನಡೆಯಲಿದೆ.
ಹಂತ 2 (ಜೂನ್ 19-23): ಆಯ್ಕೆಯಾದ ಕ್ರೀಡಾಪಟುಗಳಿಗೆ ಐದು ದಿನಗಳ ಕಾಲ ತಾಂತ್ರಿಕ ಅಭಿವೃದ್ಧಿ, ತಂತ್ರಾತ್ಮಕ ಅರಿವು ಮತ್ತು ದೈಹಿಕ ಸಿದ್ಧತೆಯ ಕುರಿತು ತೀವ್ರತರದ ‘ಮಾಸ್ಟರ್‌ಕ್ಲಾಸ್’ ತರಬೇತಿ ನೀಡಲಾಗುತ್ತದೆ.
ಈ ಕುರಿತು ಮಾತನಾಡಿದ ಅಸ್ಸಾಂನ ಕ್ರೀಡಾ ಸಚಿವೆ ಶ್ರೀಮತಿ ನಂದಿತಾ ಗೋರ್ಲೊಸ, “ನಮ್ಮ ಕ್ರೀಡಾಪಟುಗಳಿಗೆ ಜಾಗತಿಕ ಮಟ್ಟದ ಜ್ಞಾನ ಮತ್ತು ಬೆಂಬಲ ನೀಡುವುದು ನಮ್ಮ ಉದ್ದೇಶ. ಅಸ್ಸಾಂ ಮತ್ತು ಇಡೀ ದೇಶದ ಕ್ರೀಡಾ ಭವಿಷ್ಯವನ್ನು ಬಲಪಡಿಸಲು ನಾವು ಬದ್ಧರಾಗಿದ್ದೇವೆ,” ಎಂದು ತಿಳಿಸಿದರು.
ಹೈ-ಪರ್ಫಾರ್ಮೆನ್ಸ್ ನಿರ್ದೇಶಕ ಗ್ಯಾರಿ ಹಾಲ್ ಅವರ ನೇತೃತ್ವದ ‘ಫೈಟಿಂಗ್ ಚಾನ್ಸ್’ ಯೋಜನೆಯ ಭಾಗವಾಗಿ ಈ ಕಾರ್ಯಕ್ರಮ ನಡೆಯುತ್ತಿದೆ. ಮುಖ್ಯವಾಗಿ ಮಹಿಳಾ ಮಾರ್ಷಲ್ ಆರ್ಟ್ಸ್ ಪಟುಗಳನ್ನು ಗುರುತಿಸಿ, ಅವರಿಗೆ ವಿಶೇಷ ತರಬೇತಿ ನೀಡುವ ಮೂಲಕ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವಂತೆ ಸಿದ್ಧಪಡಿಸುವುದು ಈ ಅಭಿಯಾನದ ದೂರದೃಷ್ಟಿಯಾಗಿದೆ.

