ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಜಯ ಹಜಾರೆ ಟೂರ್ನಿಮೆಂಟ್‌ನ ಪಂದ್ಯ ಸೇರಿದಂತೆ ಐಪಿಎಲ್ ಪಂದ್ಯಾವಳಿಗಳನ್ನು ಆಯೋಜಿಸಲು ಕೆಎಸ್‌ಸಿಎ ನೂತನ ಆಡಳಿತ ಮಂಡಳಿ ರಾಜ್ಯ ಸರ್ಕಾರದ ಅನುಮತಿ ಕೇಳಿದೆ.
ಅನುಮತಿ ನೀಡುವುದನ್ನು ರಾಜ್ಯ ಕ್ಯಾಬಿನೆಟ್ ರಾಜ್ಯ ಗೃಹ ಇಲಾಖೆಯ ವಿವೇಚನೆಗೆ ಬಿಟ್ಟಿದೆ. ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ ಪ್ರಸಾದ್ ಈಗಾಗಲೇ ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರನ್ನು ಭೇಟಿಯಾಗಿ ಕ್ರಿಕೆಟ್ ಪಂದ್ಯ ಆಯೋಜಿಸಲು ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯ ಆಯೋಜನೆಗೆ ಅನುಮತಿ ನೀಡುವ ಮುನ್ನ ಜಸ್ಟೀಸ್ ಮೈಕೆಲ್ ಡಿ ಕುನ್ಹಾ ಆಯೋಗದ ಶಿಫಾರಸ್ಸುಗಳನ್ನು ಜಾರಿಗೆ ತರಬೇಕಾಗಿದೆ. ಸ್ಟೇಡಿಯಂಗೆ ಸೂಕ್ತ ಪೊಲೀಸ್ ಭದ್ರತೆ, ಜನದಟ್ಟಣೆ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಹೀಗಾಗಿ ಇವೆಲ್ಲವನ್ನೂ ಪರಿಶೀಲಿಸಲು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಜಿಬಿಎ ಆಯುಕ್ತರು ಹಾಗೂ ಪೊಲೀಸ್ ಕಮೀಷನರ್ ನೇತೃತ್ವದಲ್ಲಿ ಸಮಿತಿ ರಚಿಸಿದ್ದಾರೆ.
ಇಂದು ಡಾ.ಜಿ.ಪರಮೇಶ್ವರ್ ಅವರು ಸಮಿತಿ ರಚಿಸಿದ್ದಾರೆ. ಸಮಿತಿಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು, ಪಿಡಬ್ಲ್ಯುಡಿ, ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ , ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಇದ್ದಾರೆ. ಈ ಸಮಿತಿಯು ಸ್ಟೇಡಿಯಂಗೆ ಭೇಟಿ ನೀಡಿ ವ್ಯವಸ್ಥೆಗಳನ್ನು ವೀಕ್ಷಿಸಿ ತನ್ನ ವರದಿಯನ್ನು ಗೃಹ ಇಲಾಖೆಗೆ ನೀಡಲಿದೆ.
ಅದರ ಆಧಾರದ ಮೇಲೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜನೆಗೆ ಅನುಮತಿ ನೀಡಬೇಕೇ ಬೇಡವೇ ಎಂಬ ಬಗ್ಗೆ ಅಂತಿಮ ತೀರ್ಮಾನವನ್ನು ರಾಜ್ಯ ಗೃಹ ಇಲಾಖೆ ತೆಗೆದುಕೊಳ್ಳಲಿದೆ.
ಇಂದು ಬೆಂಗಳೂರು ಪೊಲೀಸ್ ಕಮೀಷನರ್ ಸೀಮಂತ್ ಕುಮಾರ್ ಸಿಂಗ್ ನೇತೃತ್ವದ ಸಮಿತಿಯು ಚಿನ್ನಸ್ವಾಮಿ ಸ್ಟೇಡಿಯಂಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಕ್ಕೆ ಅನುಮತಿ? ಸಮಿತಿ ರಚಿಸಿದ ಗೃಹ ಸಚಿವ ಪರಮೇಶ್ವರ್

