ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಖ್ಯಾತ ಕ್ರಿಕೆಟಿಗ ಕೃಷ್ಣಪ್ಪ ಗೌತಮ್ ತಮ್ಮ 37 ನೇ ವಯಸ್ಸಿನಲ್ಲಿ ಎಲ್ಲಾ ರೀತಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
ಸೋಮವಾರ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ನೇತೃತ್ವದ ಹೊಸ ಕೆಎಸ್‌ಸಿಎ ಮಂಡಳಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಘೋಷಣೆ ಮಾಡಿದರು.
37 ವರ್ಷದ ಗೌತಮ್, ಸುಮಾರು 14 ವರ್ಷಗಳ ಕಾಲ ಕರ್ನಾಟಕದ ಪರ ಆಡಿದ ಎಲ್ಲಾ ಮಾದರಿಗಳಲ್ಲಿ ರಣಜಿ ಟ್ರೋಫಿಯಲ್ಲಿ ಒಂದು ಶತಕ ಮತ್ತು ಐದು ಅರ್ಧಶತಕಗಳು ಸೇರಿದಂತೆ 394 ವಿಕೆಟ್‌ಗಳು ಮತ್ತು 2783 ರನ್‌ಗಳನ್ನು ಗಳಿಸಿದ್ದಾರೆ.
2018-19ರಲ್ಲಿ ಕರ್ನಾಟಕದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಗೆಲುವಿನಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು. ಇದು ಅವರ ವೃತ್ತಿಜೀವನದ ಅತ್ಯಂತ ಶ್ರೇಷ್ಠ ಸಾಧನೆಯಲ್ಲಿ ಒಂದಾಗಿದೆ.
2021 ರಲ್ಲಿ, ಆರಂಭದಲ್ಲಿ ನೆಟ್ ಬೌಲರ್ ಆಗಿ ಆಯ್ಕೆಯಾದ ನಂತರ, ಶ್ರೀಲಂಕಾ ಪ್ರವಾಸದಲ್ಲಿ ಅರ್ಧಕ್ಕಿಂತ ಹೆಚ್ಚು ತಂಡವು ಕೋವಿಡ್ -19ಗೆ ತುತ್ತಾದ ನಂತರ ಗೌತಮ್ ಟೀಮ್ ಇಂಡಿಯಾ ಪರ ಆಡುವ ಅವಕಾಶ ಪಡೆದರು. ಅವರು ತಮ್ಮ ಏಕೈಕ ODI ಪಂದ್ಯದಲ್ಲಿ 49ರನ್ ನೀಡಿ 1 ವಿಕೆಟ್ ಪಡೆದಿದ್ದರು.
ಗೌತಮ್ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರವಾಗಿ ಆಡಿ ಸಣ್ಣ ಪ್ರಮಾಣದ ಯಶಸ್ಸು ಕಂಡಿದ್ದರು. 2018ರಲ್ಲಿ ದಿವಂಗತ ಸ್ಪಿನ್ ದಿಗ್ಗಜ ಶೇನ್ ವಾರ್ನ್ , ಕೆ.ಗೌತಮ್ ಅವರನ್ನು ತಮ್ಮ ಐಪಿಎಲ್ ಪ್ರಾಜೆಕ್ಟ್ ಎಂದು ಕರೆದಿದ್ದು ಸಖತ್ ಫೇಮಸ್ ಆಗಿತ್ತು.
ರಾಜಸ್ಥಾನ ರಾಯಲ್ಸ್ ಅಲ್ಲದೆ ಪಂಜಾಬ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳನ್ನು ಪ್ರತಿನಿಧಿಸಿದ್ದು, ಒಟ್ಟು 36 ಪಂದ್ಯಗಳನ್ನು ಆಡಿದ್ದಾರೆ. 8.24 ರ ಎಕಾನಮಿಯಲ್ಲಿ 21 ವಿಕೆಟ್‌ಗಳನ್ನು ಪಡೆದಿದ್ದಾರೆ.
2025ರಲ್ಲಿ ಮೈಸೂರು ವಾರಿಯರ್ಸ್ ತಂಡದ ಪರವಾಗಿ ಮೆಂಟರ್ ಹಾಗೂ ಪ್ಲೇಯರ್‌ಆಗಿ ಆಡಿದ್ದರು. ಅಲ್ಲದೆ, ಕಳೆದ 2 ವರ್ಷಗಳಿಂದ ಅವರು ಕ್ರಿಕಟ್ ವಿಶ್ಲೇಷಣೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

