ಹೊಸದಿಗಂತ ಡಿಜಿಟಲ್ ಡೆಸ್ಕ್:
ನರೇಗಾ ಯೋಜನೆಯಲ್ಲಿ ಮಹಾತ್ಮಾ ಗಾಂಧೀಜಿ ಹೆಸರನ್ನು ಕೈಬಿಟ್ಟಿರುವ ವಿಚಾರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಪಕ್ಷದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಗಾಂಧೀಜಿಯ ಹೆಸರನ್ನು ಹೇಳಿಕೊಂಡು ರಾಜಕೀಯ ಲಾಭ ಪಡೆಯುವುದು ಕಾಂಗ್ರೆಸ್‌ನ ಹಳೆಯ ಚಾಳಿ ಎಂದು ಅವರು ಆರೋಪಿಸಿದ್ದಾರೆ. ಗಾಂಧೀಜಿ ಕುರಿತು ಮಾತನಾಡುವುದಕ್ಕೂ ಕಾಂಗ್ರೆಸ್‌ಗೆ ಭಯವಿದೆ, ಏಕೆಂದರೆ ಅವರ ವಿಚಾರಧಾರೆಗಳು ಪಕ್ಷದ ರಾಜಕಾರಣಕ್ಕೆ ಅಡ್ಡಿಯಾಗುತ್ತವೆ ಎಂಬ ಆರೋಪವನ್ನು ಬೊಮ್ಮಾಯಿ ಮಾಡಿದ್ದಾರೆ.
ಮಹಾತ್ಮಾ ಗಾಂಧೀಜಿ ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಮಾಡಲು ಸಲಹೆ ನೀಡಿದ್ದರು. ಆದರೆ ಆ ಸಲಹೆಯನ್ನು ಅಂದು ಪ್ರಧಾನಿಯಾಗಿದ್ದ ನೆಹರು ಅವರು ಪಾಲಿಸಲಿಲ್ಲ. ಆ ದಿನವೇ ಗಾಂಧೀಜಿ ಹತ್ಯೆ ನಡೆದಿತ್ತು ಎಂದು ಬೊಮ್ಮಾಯಿ ಹೇಳಿದರು. ನಂತರ ತುರ್ತು ಪರಿಸ್ಥಿತಿಯನ್ನು ಜಾರಿ ಮಾಡುವ ಮೂಲಕ ಗಾಂಧೀಜಿಯ ಮೌಲ್ಯಗಳನ್ನೇ ಮತ್ತೊಮ್ಮೆ ಹತ್ಯೆ ಮಾಡಲಾಯಿತು ಎಂದು ಅವರು ವಾಗ್ದಾಳಿ ನಡೆಸಿದರು.
ಗಾಂಧಿ ಮತ್ತು ರಾಮನನ್ನು ಬೇರ್ಪಡಿಸುವ ಪ್ರಯತ್ನ ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸಿದ ಬೊಮ್ಮಾಯಿ, ಗಾಂಧೀಜಿಯ ಆತ್ಮ ರಾಮನ ಹೆಸರು ಹೇಳುತ್ತದೆ, ರಾಮರಾಜ್ಯದ ಪರಿಕಲ್ಪನೆ ಅವರ ಆದರ್ಶವಾಗಿತ್ತು ಎಂದು ಹೇಳಿದರು.

