ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್‌ನಲ್ಲಿ ಅಸಲಿ ಹೈಕಮಾಂಡ್ ಯಾರು ಎನ್ನುವುದೇ ತಿಳಿಯುತ್ತಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಲೇವಡಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೆಡೆ ಸಿದ್ದರಾಮಯ್ಯ ಅವರು ತಾವೇ ಐದು ವರ್ಷ ಸಿಎಂ ಆಗಿ ಮುಂದುವರಿಯುವುದಾಗಿ ಹೇಳುತ್ತಾ, ತಾನೇ ಹೈಕಮಾಂಡ್ ಎಂಬಂತೆ ವರ್ತಿಸುತ್ತಿದ್ದಾರೆ. ಮತ್ತೊಂದೆಡೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲಿ ಈಗಾಗಲೇ ನಿರ್ಧಾರವಾಗಿದೆ. ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆ ಸೂತ್ರವಿದೆ ಎನ್ನುತ್ತಾರೆ. ಹೈಕಮಾಂಡ್ ಸ್ಥಾನದಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾತ್ರ ಈ ಗೊಂದಲಗಳನ್ನು ರಾಜ್ಯದಲ್ಲಿಯೇ ಬಗೆಹರಿಸಿಕೊಳ್ಳಿ ಎಂದು ಜಾರಿಕೊಳ್ಳುತ್ತಿದ್ದಾರೆ ಎಂದುಹೇಳಿದರು.
ರಾಹುಲ್ ಗಾಂಧಿ ವಿರುದ್ಧ ಟೀಕೆ
ರಾಹುಲ್ ಗಾಂಧಿ ಅವರ ವಿರುದ್ಧವೂ ಕಿಡಿಕಾರಿದ ಶೋಭಾ ಕರಂದ್ಲಾಜೆ ಅವರು, ರಾಹುಲ್ ಗಾಂಧಿ ಅವರಿಗೆ ಇಂತಹ ಗೊಂದಲಗಳನ್ನು ಬಗೆಹರಿಸಲು ಪುರುಸೊತ್ತಿಲ್ಲ. ಅವರು ವಿದೇಶಗಳಲ್ಲಿ ನಿಂತು ದೇಶವಿರೋಧಿ ಕೆಲಸ ಮಾಡುವುದರಲ್ಲೇ ಬ್ಯುಸಿಯಾಗಿದ್ದಾರೆ. ಇದರಿಂದಾಗಿ ರಾಜ್ಯ ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ಯಾರು ಎಂಬ ಪ್ರಶ್ನೆ ಬಲವಾಗಿ ಕಾಡುತ್ತಿದೆ ಎಂದರು.

