ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿನಿರಂಗದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತನ್ನದೇ ಆದ ಸ್ಥಾನವನ್ನು ಗಳಿಸಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ವಿಭಿನ್ನ ಪಾತ್ರದ ಮೂಲಕ ಚರ್ಚೆಗೆ ಬಂದಿದ್ದಾರೆ. ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚುತ್ತಿದ್ದರೂ, ಹೊಸ ಕಥೆಗಳು ಮತ್ತು ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡುತ್ತಿರುವ ರಶ್ಮಿಕಾ, ಇದೀಗ ‘ಮೈಸಾ’ ಸಿನಿಮಾದ ಫಸ್ಟ್ ಗ್ಲಿಂಪ್ಸ್ ಮೂಲಕ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ಫಸ್ಟ್ ಗ್ಲಿಂಪ್ಸ್‌ನಲ್ಲಿ ರಶ್ಮಿಕಾ ಸಂಪೂರ್ಣವಾಗಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ಬೇಡಿ, ಇನ್ನೊಂದೆಡೆ ಬಂದೂಕು, ದೇಹದ ಮೇಲೆ ರಕ್ತದ ಗುರುತುಗಳು ಹಾಗೂ ಮುಖದಲ್ಲಿ ನೋವು ಮತ್ತು ಆಕ್ರೋಶದ ಅಭಿವ್ಯಕ್ತಿ ಈ ದೃಶ್ಯಗಳೇ ಸಿನಿಮಾ ಗಂಭೀರ ಹಾಗೂ ತೀವ್ರ ಕಥಾವಸ್ತುವಿನತ್ತ ಸೂಚಿಸುತ್ತವೆ. ಈ ಲುಕ್ ನೋಡಿ ಅಭಿಮಾನಿಗಳು ಬೆಚ್ಚಿ ಬಿದ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ರವೀಂದ್ರ ಪುಲ್ಲೆ ನಿರ್ದೇಶನದ ‘ಮೈಸಾ’ ಅವರ ಮೊದಲ ನಿರ್ದೇಶನದ ಸಿನಿಮಾ. ‘ಅನ್‌ಫಾರ್ಮುಲಾ ಫಿಲ್ಮ್ಸ್’ ಬ್ಯಾನರ್‌ನಲ್ಲಿ ಭಾರಿ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಇದು ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಆಗಿದ್ದು, ಕನ್ನಡ, ತೆಲುಗು, ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಗ್ಲಿಂಪ್ಸ್ ಬಿಡುಗಡೆಯಾಗಿದೆ. ಈಶ್ವರಿ ರಾವ್, ಗುರು ಸೋಮಸುಂದರಂ ಮತ್ತು ರಾವ್ ರಮೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶ್ರೀಯಾಸ್ ಪಿ. ಕೃಷ್ಣ ಅವರ ಛಾಯಾಗ್ರಹಣ ಮತ್ತು ಜೇಕ್ಸ್ ಬೆಜೋಯ್ ಅವರ ಸಂಗೀತ ಸಿನಿಮಾದ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ.

