ಹೊಸದಿಗಂತ ಡಿಜಿಟಲ್ ಡೆಸ್ಕ್:
ಡೆಲ್ಲಿ ಮೆಟ್ರೋ ಜಾಲ ಮತ್ತಷ್ಟು ವಿಸ್ತರಣೆಗೆ ಕೇಂದ್ರ ಸರಕಾರ ಸಮ್ಮತಿಸಿದ್ದು, 12,015 ಕೋಟಿ ರೂ ವೆಚ್ಚದಲ್ಲಿ ಮೆಟ್ರೋ ವಿಸ್ತರಣೆಯ ಯೋಜನೆಗೆ ಕೇಂದ್ರ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಕೇಂದ್ರ ಸಚಿವ ಎ ವೈಷ್ಣವ್ ಅವರು ಈ ವಿಚಾರವನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಡೆಲ್ಲಿ ಮೆಟ್ರೋ ಫೇಸ್-5 (ಎ) ಪ್ರಾಜೆಕ್ಟ್ ಅಡಿಯಲ್ಲಿ ಮೂರು ಹೊಸ ಕಾರಿಡಾರ್ ಮೊದಲಾದವರು ನಿರ್ಮಾಣವಾಗಲಿವೆ.
ಪ್ರಸ್ತಾಪವಾಗಿರುವ ಯೋಜನೆಯಲ್ಲಿ 16 ಕಿಮೀ ಜಾಲ ವಿಸ್ತರಣೆ ಆಗುವುದರ ಜೊತೆಗೆ 13 ಹೊಸ ಮೆಟ್ರೋ ಸ್ಟೇಷನ್ಗಳು ನಿರ್ಮಾಣವಾಗಲಿವೆ. ಈ ಪೈಕಿ 10 ಸುರಂಗ ನಿಲ್ದಾಣಗಳಾದರೆ, ಉಳಿದ ಮೂರು ಎಲಿವೇಟೆಡ್ ನಿಲ್ದಾಣವಾಗಲಿವೆ. ಸದ್ಯ ಡೆಲ್ಲಿ ಮೆಟ್ರೋ ಭಾರತದಲ್ಲಿರುವ ಅತಿದೊಡ್ಡ ಮೆಟ್ರೋ ಜಾಲ ಎನಿಸಿದೆ. 395 ಕಿಮೀ ಉದ್ದದ ನೆಟ್ವರ್ಕ್ ಹೊಂದಿದೆ. ಈಗ ಐದನೇ ಹಂತದ ಮೆಟ್ರೋ ಕಾಮಗಾರಿ ಪೂರ್ಣಗೊಂಡರೆ, ಇದರ ಒಟ್ಟು ಜಾಲ 400 ಕಿಮೀ ದಾಟುತ್ತದೆ.
ಡೆಲ್ಲಿ ಮೆಟ್ರೋದ ಹೊಸ ಪ್ರಸ್ತಾವಿತ ಮೂರು ಕಾರಿಡಾರ್:
ಆರ್.ಕೆ. ಆಶ್ರಮ್ ಮಾರ್ಗ್ನಿಂದ ಇಂದ್ರಪ್ರಸ್ಥವರೆಗೆ 9.913 ಕಿಮೀ.
ಏರೋಸಿಟಿಯಿಂದ ಇಂದಿರಾಗಾಂಧಿ ಏರ್ಪೋರ್ಟ್ ಟರ್ಮಿನಲ್ 1ರವರೆಗೆ 2.263 ಕಿಮೀ
ತುಘಲಕಾಬಾದ್ನಿಂದ ಕಾಲಿಂದಿ ಕುಂಜ್ವರೆಗೆ 3.9 ಕಿಮೀ.
ಭಾರತದ ಕೆಲವು ನಗರಗಳಲ್ಲಿ ಮೆಟ್ರೋ ರೈಲು ಸೇವೆ ಇದೆ. ಡೆಲ್ಲಿ ಮೆಟ್ರೋ 400 ಕಿಮೀಯೊಂದಿಗೆ ಅತಿದೊಡ್ಡ ಜಾಲ ಹೊಂದಿದೆ. ಬೆಂಗಳೂರಿನ ನಮ್ಮ ಮೆಟ್ರೋ ಎರಡನೇ ಸ್ಥಾನ ಪಡೆಯುತ್ತದೆ. ಇದು ಸುಮಾರು 100 ಕಿಮೀ ಜಾಲ ಹೊಂದಿದೆ. ಹೈದರಬಾದ್, ಮುಂಬೈ ಮತ್ತು ಕೋಲ್ಕತಾದ ಮೆಟ್ರೋಗಳ ಜಾಲ 50ರಿಂದ 80 ಕಿಮೀ ಇದೆ.

