Wednesday, December 24, 2025

ಲೈಂಗಿಕ ದೌರ್ಜನ್ಯ ಕೇಸ್: ಕ್ರಿಕೆಟಿಗ ಯಶ್ ದಯಾಳ್​ ಶಾಕ್, ಜಾಮೀನು ಅರ್ಜಿ ವಜಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರಿಕೆಟಿಗ,ಎಡಗೈ ವೇಗದ ಬೌಲರ್ ಯಶ್ ದಯಾಳ್​ಗೆ ಬಂಧನದ ಭೀತಿ ಎದುರಾಗಿದೆ. ಜೈಪುರದ ಪೋಕ್ಸೋ ನ್ಯಾಯಾಲಯವು ಯಶ್ ದಯಾಳ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪದ ಮೇಲೆ ಪೊಲೀಸರು ಯಶ್ ದಯಾಳ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.

ಜೈಪುರ ಮೆಟ್ರೋಪಾಲಿಟನ್ ಫಸ್ಟ್‌ನ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶೆ ಅಲ್ಕಾ ಬನ್ಸಾಲ್ ಅವರ ತೀರ್ಪಿನ ಪ್ರಕಾರ, ಲಭ್ಯವಿರುವ ಪುರಾವೆಗಳು ಮತ್ತು ತನಿಖೆಯ ವರದಿಯನ್ನು ನೋಡಿದರೆ, ಆರೋಪಿ ವಿರುದ್ಧ ಷಡ್ಯಂತ್ರ ಮಾಡಲಾಗಿದೆ ಎಂಬುದನ್ನು ಒಪ್ಪಲಾಗದು. ತನಿಖೆಯ ವರದಿಯನ್ನು ಗಮನಿಸಿದರೆ, ಇದರಲ್ಲಿ ಆರೋಪಿಯ ಪಾತ್ರವಿದೆ ಎಂಬುದನ್ನು ಅರಿಯಬಹುದು ಎಂಬ ತೀರ್ಪು ನೀಡಿದ್ದು, ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ.

ಆದಾಗ್ಯೂ ಯಶ್ ದಯಾಳ್​ಗೆ ಇನ್ನೂ ಹೈಕೋರ್ಟ್‌ಗೆ ಹೋಗುವ ಆಯ್ಕೆಯಿದೆ.

ಜುಲೈ 23, 2025 ರಂದು, ಜೈಪುರದ ಸಂಗನೇರ್ ಸದರ್ ಪೊಲೀಸ್ ಠಾಣೆಯಲ್ಲಿ 19 ವರ್ಷದ ಯುವತಿಯೊಬ್ಬಳು ಯಶ್ ದಯಾಳ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಯುವತಿ ದೂರು ನೀಡಿರುವ ಪ್ರಕಾರ, ‘ಎರಡು ವರ್ಷಗಳ ಹಿಂದೆ ಐಪಿಎಲ್ ಪಂದ್ಯವನ್ನಾಡಲು ಯಶ್ ದಯಾಳ್ ಜೈಪುರಕ್ಕೆ ಬಂದಿದ್ದರು. ಆ ವೇಳೆ ನಾನು ಅಪ್ರಾಪ್ತ ವಯಸ್ಸಿನವಳಾಗಿದ್ದು ತನ್ನ ಕ್ರಿಕೆಟ್ ವೃತ್ತಿಜೀವನದ ಬಗ್ಗೆ ಸಲಹೆ ನೀಡುವ ನೆಪದಲ್ಲಿ ಯಶ್ ದಯಾಳ್ ತನ್ನನ್ನು ಸೀತಾಪುರದಲ್ಲಿರುವ ಹೋಟೆಲ್ ಇಂಟರ್ ಕಾಂಟಿನೆಂಟಲ್‌ಗೆ ಕರೆಸಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಳು.

‘ಐಪಿಎಲ್ ವೇಳೆ ದೈಹಿಕ ಕಿರುಕುಳ ನೀಡಿದ್ರು’; ಯಶ್ ದಯಾಳ್ ವಿರುದ್ಧ ದೂರು ನೀಡಿದ ಮತ್ತೋರ್ವ ಯುವತಿ

ಆರ್‌ಸಿಬಿ ಪರ ಕಣಕ್ಕಿಳಿಯುತ್ತಾರಾ ದಯಾಳ್?
ಲೈಂಗಿಕ ದೌರ್ಜನ್ಯ ಆರೋಪದಿಂದ ಬಂಧನ ಭೀತಿಯಲ್ಲಿರುವ ಯಶ್ ದಯಾಳ್, ಕ್ರಿಕೆಟ್ ಲೋಕದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಆದಾಗ್ಯೂ ಆರ್‌ಸಿಬಿ ತಂಡವು ಅವರನ್ನು ತಂಡದಲ್ಲಿ ಉಳಿಸಿಕೊಂಡಿದೆ. 2024 ರ ಐಪಿಎಲ್​ಗೂ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡಿದ್ದ ದಯಾಳ್​ಗೆ ಆರ್​ಸಿಬಿ 5 ಕೋಟಿ ರೂ. ವೇತನ ನೀಡುತ್ತಿದೆ. ಕಳೆದ ಆವೃತ್ತಿಯಲ್ಲಿ ಆರ್​ಸಿಬಿ ಚಾಂಪಿಯನ್ ಆಗುವಲ್ಲಿ ಯಶ್ ದಯಾಳ್ ಪ್ರಮುಖ ಪಾತ್ರ ವಹಿಸಿದ್ದರು. ಪರಿಣಾಮವಾಗಿ, ಅವರನ್ನು ಐಪಿಎಲ್ 2026 ಕ್ಕೂ ತಂಡಕ್ಕೆ ಉಳಿಸಿಕೊಳ್ಳಲಾಗಿದೆ.

error: Content is protected !!