ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಮಿತಿ ಮೀರುತ್ತಿರುವ ‘ಫ್ಯಾನ್ಸ್ ವಾರ್’ ಹಾಗೂ ಮಹಿಳೆಯರ ವಿರುದ್ಧದ ಅವಹೇಳನಕಾರಿ ಕಾಮೆಂಟ್‌ಗಳ ಬಗ್ಗೆ ನಟ ಶಿವರಾಜ್‌ಕುಮಾರ್ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದರಿಂದ, ಅವರು ಈಗಾಗಲೇ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಹಿಂದೆ ನಟಿ ರಮ್ಯಾ ಅವರ ವಿರುದ್ಧವೂ ಇಂತಹದ್ದೇ ಘಟನೆಗಳು ನಡೆದಿದ್ದವು. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಶಿವಣ್ಣ, ಅಭಿಮಾನಿಗಳಿಗೆ ಮೃದುವಾಗಿ ಎಚ್ಚರಿಸಿದ್ದಾರೆ.
“ಫ್ಯಾನ್ಸ್ ವಾರ್ ಎಂಬುದು ಒಂದು ಅಪಾಯಕಾರಿ ಕಿಡಿ. ಅದು ಒಬ್ಬರಿಂದ ಇನ್ನೊಬ್ಬರಿಗೆ ಹರಡಿ ದೊಡ್ಡ ಅನಾಹುತಕ್ಕೆ ದಾರಿ ಮಾಡಿಕೊಡುತ್ತದೆ. ಇದನ್ನು ನಿಲ್ಲಿಸಬೇಕು ಎಂದು ನಾನು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಕುಟುಂಬವಿರುತ್ತದೆ. ಯಾವುದೇ ಮಹಿಳೆಯ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಅಥವಾ ಕಾಮೆಂಟ್ ಮಾಡುವುದು ಅಕ್ಷಮ್ಯ ಅಪರಾಧ. ಮಹಿಳೆಯರನ್ನು ಗೌರವಿಸುವುದನ್ನು ಕಲಿಯಬೇಕು,” ಎಂದು ಅವರು ಕಿವಿಮಾತು ಹೇಳಿದ್ದಾರೆ.
ಜೊತೆಗೆ, ಇಂತಹ ಕಿಡಿಗೇಡಿತನ ಪ್ರದರ್ಶಿಸಿದರೆ ಪೊಲೀಸ್ ಕೇಸ್ ಆಗಿ ಭವಿಷ್ಯ ಹಾಳಾಗುತ್ತದೆ. ಹೀಗಾಗಿ ಅಭಿಮಾನಿಗಳು ಸಂಯಮದಿಂದ ವರ್ತಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

