Friday, December 26, 2025

ಸೆಂಟರ್‌ ಆಫ್‌ ಅಟ್ರಾಕ್ಷನ್‌ ಆದ ಅಂಜನಾದ್ರಿ ಕಿತ್ತಾಟ, 3 ಕೇಸ್​ ಬುಕ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೊಪ್ಪಳ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತ. ಅದು ಹನುಮ ಹುಟ್ಟಿದ ಸ್ಥಳ.ಈ ಕ್ಷೇತ್ರಕ್ಕೆ ದೇಶ-ವಿದೇಶದಿಂದ ಭಕ್ತರು ಬರುತ್ತಾರೆ. 575 ಮೆಟ್ಟಿಲೇರಿ ಹನುಮನ ದರುಶನ ಪಡೆದು ಪುನೀತರಾಗುತ್ತಾರೆ. ಇದೇ ಹನುಮ ಹುಟ್ಟಿದ ನಾಡು ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ. ಸ್ವಾಮೀಜಿಗಳಿಬ್ಬರು ಗರ್ಭಗುಡಿಯಲ್ಲಿಯೇ ಜಗಳ ಮಾಡಿಕೊಂಡಿದ್ದಾರೆ. ಖಾವಿಧಾರಿಗಳು ಬಾಯಲ್ಲಿ ಕೀಳುಮಟ್ಟದ ಪದ ಪ್ರಯೋಗವಾಗಿದೆ. ಸದ್ಯ ಪ್ರಕರಣ ಗಂಭೀರವಾಗಿದ್ದು, ಎರಡು ದಿನದ ಅವಧಿಯಲ್ಲಿ ಮೂರು ಕೇಸ್ ದಾಖಲಾಗಿವೆ.

ಈ ಅಂಜನಾದ್ರಿ ಪರ್ವತದಲ್ಲಿ ಹನುಮ ಹುಟ್ಟಿದ ಎನ್ನುವ ಪ್ರತೀತಿ ಇದೆ. ಈ ಕ್ಷೇತ್ರಕ್ಕೆ ದೇಶ ವಿದೇಶಗಳಿಂದ ಭಕ್ತರು ಬರುತ್ತಾರೆ. ಇದೇ ಅಂಜನಾದ್ರಿ ಕಳೆದ ನಾಲ್ಕು ದಿನಗಳಿಂದ ಸಾಕಷ್ಟು ಸುದ್ದಿಯಲ್ಲಿದೆ. ಅದಕ್ಕೆ ಕಾರಣ ಸ್ವಾಮೀಜಿಗಳಿಬ್ಬರ ನಡುವಿನ ಗಲಾಟೆ. ಕಳೆದ ನಾಲ್ಕು ದಿನಗಳ ಹಿಂದೆ ಹನುನ ಹುಟ್ಟಿದ ಜಾಗದಲ್ಲಿ ಅರ್ಚಕ ಮಾಹಂತ ವಿದ್ಯಾದಾಸ್ ಬಾಬಾ ಹಾಗೂ ಹಂಪಿಯ ಗೋವಿಂದಾನಂದ ಸರಸ್ವತಿ ಮಧ್ಯೆ ಪೂಜಾ ವಿಚಾರಕ್ಕೆ ಗಲಾಟೆಯಾಗಿತ್ತು. ಮಾತಿಗೆ ಮಾತು ಬೆಳದಿತ್ತು. ಒಂದು ಹಂತಕ್ಕೆ ಕೈಕೈ ಮಿಲಾಯಿಸುವ ಹಂತಕ್ಕೂ ಹೋಗಿತ್ತು.

ಯಾವಾಗ ಅಂಜನಾದ್ರಿಯಲ್ಲಿ ಗಲಾಟೆಯಾಯಿತೋ ಗೋವಿಂದಾನಂದ ಸರಸ್ವತಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಗೆ ವಿದ್ಯಾದಾಸ್ ಬಾಬಾ ಸೇರಿ 10 ಜನರ ವಿರುದ್ದ ದೂರು ನೀಡಿದ್ದರು. ಇತ್ತ ವಿದ್ಯಾದಾಸ್ ಬಾಬಾ ಕೂಡ ಆನಲೈನ್​ನಲ್ಲಿ ದೂರು ದಾಖಲಿಸಿದ್ದರು. ಆದರೆ ಅದು ಅಧಿಕೃತವಾಗಿಲ್ಲ, ಈ ಮಧ್ಯೆ ಮರುದಿನ ಮತ್ತೆ ಪಂಚನಾಮೆಗೆ ಬಂದಾಗ ವಿದ್ಯಾದಾಸ್ ಬಾಬಾ ಬೆಂಬಲಿಗರು, ಗೋವಿಂದಾನಂದ ಸರಸ್ವತಿ ಮೇಲೆ ಹಲ್ಲೆ ಮಾಡಿದ್ದಾರೆ. ತಲೆಗೆ ಹೊಡೆದು ಕಬ್ಬಿಣದ ಪೈಪ್​ನಿಂದ ಹಲ್ಲೆಗೆ ಮುಂದಾಗಿದ್ದರು. ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ, ಗಂಗಾವತಿ ಗ್ರಾಮೀಣ ಪೊಲೀಸರು ಹಲ್ಲೆಗೆ ಮುಂದಾಗಿದ್ದ ಐವರನ್ನು ಅರೆಸ್ಟ್ ಮಾಡಿದ್ದಾರೆ. ವಿದ್ಯಾದಾಸ್ ಬಾಬಾ ವಿರುದ್ದ ಗೋವಿಂದಾನಂದ ಸರಸ್ವತಿ ಗ್ರಾಮೀಣ ಠಾಣೆಯಲ್ಲಿ ಮತ್ತೊಂದು ದೂರು ದಾಖಲು ಮಾಡಿದ್ದಾರೆ.

error: Content is protected !!