ಹೊಸದಿಗಂತ ಡಿಜಿಟಲ್ ಡೆಸ್ಕ್:
ಐದು ಪಂದ್ಯಗಳ ಟಿ20 ಸರಣಿಯಲ್ಲಿ ಈಗಾಗಲೇ ಆತಿಥೇಯ ಭಾರತ ಮಹಿಳಾ ತಂಡ ಸಂಪೂರ್ಣ ಹಿಡಿತ ಸಾಧಿಸಿದೆ. ಮೊದಲ ಎರಡು ಪಂದ್ಯಗಳಲ್ಲಿ ಸ್ಪಷ್ಟ ಮೇಲುಗೈ ತೋರಿದ ಟೀಂ ಇಂಡಿಯಾ, ಇಂದು ನಡೆಯುತ್ತಿರುವ ಮೂರನೇ ಟಿ20 ಪಂದ್ಯದಲ್ಲಿ ಜಯ ದಾಖಲಿಸಿದರೆ ಸರಣಿಯನ್ನು ಅಧಿಕೃತವಾಗಿ ತನ್ನದಾಗಿಸಿಕೊಳ್ಳಲಿದೆ. ಇದರಿಂದಾಗಿ ಈ ಪಂದ್ಯವು ಭಾರತಕ್ಕೆ ಸರಣಿ ಸೀಲ್ ಮಾಡುವ ಅವಕಾಶವಾಗಿದ್ದರೆ, ಶ್ರೀಲಂಕಾ ತಂಡಕ್ಕೆ ಮಾತ್ರ ‘ಮಾಡು ಅಥವಾ ಮಡಿ’ ಹೋರಾಟವಾಗಿ ಪರಿಣಮಿಸಿದೆ.
ಟಾಸ್ನಲ್ಲಿ ಭಾರತದ ನಾಯಕಿ ಹರ್ಮನ್ಪ್ರೀತ್ ಕೌರ್ ಗೆಲುವು ಸಾಧಿಸಿದ್ದು, ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಈ ಮೂಲಕ ಶ್ರೀಲಂಕಾ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿದೆ. ಈ ಸರಣಿಯಲ್ಲಿ ಸತತ ಮೂರನೇ ಬಾರಿ ಟಾಸ್ ಗೆದ್ದಿರುವುದು ಹರ್ಮನ್ಪ್ರೀತ್ ಅವರ ಪಾಲಿಗೆ ವಿಶೇಷ ಸಂಗತಿಯಾಗಿದ್ದು, ತಂಡದ ಆತ್ಮವಿಶ್ವಾಸಕ್ಕೂ ಬಲ ನೀಡಿದೆ.
ಟಾಸ್ ಬಳಿಕ ಮಾತನಾಡಿದ ಹರ್ಮನ್ಪ್ರೀತ್, ಭಾರತದ ಪ್ಲೇಯಿಂಗ್ ಇಲೆವೆನ್ನಲ್ಲಿ ಎರಡು ಬದಲಾವಣೆಗಳಿರುವುದನ್ನು ತಿಳಿಸಿದರು. ಸ್ನೇಹ್ ರಾಣಾ ಮತ್ತು ಅರುಂಧತಿ ರೆಡ್ಡಿ ಸ್ಥಾನಕ್ಕೆ ರೇಣುಕಾ ಸಿಂಗ್ ಠಾಕೂರ್ ಹಾಗೂ ದೀಪ್ತಿ ಶರ್ಮಾ ತಂಡಕ್ಕೆ ಮರಳಿದ್ದಾರೆ. ಇತ್ತ ಶ್ರೀಲಂಕಾ ನಾಯಕಿ ಚಾಮರಿ ಅಟಾಪಟು ತಮ್ಮ ತಂಡದಲ್ಲೂ ಮೂರು ಬದಲಾವಣೆಗಳನ್ನು ಮಾಡಿಕೊಂಡಿರುವುದಾಗಿ ಹೇಳಿದರು.
ಇದನ್ನೂ ಓದಿ:
ಭಾರತ ತಂಡದಲ್ಲಿ ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ಹರ್ಮನ್ಪ್ರೀತ್ ಕೌರ್, ರಿಚಾ ಘೋಷ್ ಸೇರಿದಂತೆ ಪ್ರಮುಖ ಆಟಗಾರ್ತಿಯರು ಇದ್ದರೆ, ಶ್ರೀಲಂಕಾ ಪರ ಚಾಮರಿ ಅಟಾಪಟು, ಹರ್ಷಿತಾ ಸಮರವಿಕ್ರಮ ಮತ್ತು ನೀಲಾಕ್ಷಿಕಾ ಸಿಲ್ವಾ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಪಂದ್ಯವು ಸರಣಿಯ ದಿಕ್ಕನ್ನು ನಿರ್ಧರಿಸುವ ಪ್ರಮುಖ ಹಂತವಾಗಿ ಕಾಣುತ್ತಿದೆ.

