ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸ ವರ್ಷದ ಸಂಭ್ರಮದಲ್ಲಿ ದೇಗುಲ ದರುಶನಕ್ಕೆ ಯೋಜನೆ ಹಾಕಿಕೊಂಡಿರುವ ಭಕ್ತರಿಗೆ ಗೋವಾದಿಂದ ಮಹತ್ವದ ಮಾಹಿತಿ ಲಭ್ಯವಾಗಿದೆ. ಇತ್ತೀಚೆಗಷ್ಟೇ ಉದ್ಘಾಟನೆಗೊಂಡು ಭಾರೀ ಗಮನ ಸೆಳೆದಿರುವ ಪರ್ತಗಾಳಿ ಜೀವೋತ್ತಮ ಮಠದ ಶ್ರೀರಾಮದೇವರ ಭವ್ಯ ಕಂಚಿನ ವಿಗ್ರಹದ ದರ್ಶನಕ್ಕೆ ತಾತ್ಕಾಲಿಕ ತಡೆ ವಿಧಿಸಲು ಮಠ ಆಡಳಿತ ನಿರ್ಧರಿಸಿದೆ.
ವಿಶ್ವದ ಅತೀ ಎತ್ತರದ ಕಂಚಿನ ಶ್ರೀರಾಮ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ವಿಗ್ರಹವನ್ನು ಪ್ರಧಾನಿ ಉದ್ಘಾಟಿಸಿದ ಬಳಿಕ, ದೇಶ-ವಿದೇಶಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದರು. ಕಳೆದ ಒಂದು ತಿಂಗಳ ಅವಧಿಯಲ್ಲಿ ದಿನಕ್ಕೆ ಸರಾಸರಿ 7,000ರಿಂದ 10,000 ಮಂದಿ ಭೇಟಿ ನೀಡಿದ್ದು, ಒಟ್ಟು 2.5 ಲಕ್ಷಕ್ಕೂ ಹೆಚ್ಚು ಜನರು ದರುಶನ ಪಡೆದಿದ್ದಾರೆ.
ಇದನ್ನೂ ಓದಿ:
ಆದರೆ ವಿಗ್ರಹದ ಸುತ್ತಮುತ್ತ ನಡೆಯುತ್ತಿರುವ ಕೆಲ ಅಂತಿಮ ಹಂತದ ಕಾಮಗಾರಿಗಳ ಹಿನ್ನೆಲೆಯಲ್ಲಿ, ಜನವರಿ 2ರಿಂದ ಮಠ ಮತ್ತು ಶ್ರೀರಾಮ ಮೂರ್ತಿ ದರುಶನಕ್ಕೆ ತಾತ್ಕಾಲಿಕ ಬ್ರೇಕ್ ನೀಡಲಾಗುತ್ತದೆ. ಧನುಷಾಕಾರದ ಪಾರ್ಕ್, ರಾಮಾಯಣ ವನ, 3ಡಿ ರಾಮ ಥಿಯೇಟರ್ ಸೇರಿದಂತೆ ಹಲವು ಯೋಜನೆಗಳು ಪೂರ್ಣಗೊಳ್ಳುವ ಹಂತದಲ್ಲಿದ್ದು, ಮ್ಯೂಸಿಯಂ ಕಾರ್ಯ ಇನ್ನೂ ಬಾಕಿಯಿದೆ.
ಭಕ್ತರ ಸುರಕ್ಷತೆ ಮತ್ತು ಕಾಮಗಾರಿ ವೇಗವಾಗಿ ಮುಗಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಠದ ಆಡಳಿತ ಸ್ಪಷ್ಟಪಡಿಸಿದೆ. ಮಠ ಪುನರಾರಂಭದ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ತಿಳಿಸಲಾಗಿದೆ.

