Friday, December 26, 2025

IND-W vs SL-W 3rd T20 | ಮತ್ತೆ ಘರ್ಜಿಸಿದ ಶೆಫಾಲಿ! ಭಾರತದ ಕೈವಶವಾಯ್ತು ಟಿ20 ಸರಣಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಮಹಿಳಾ ತಂಡ ತನ್ನ ಅಜೇಯ ಓಟ ಮುಂದುವರಿಸಿದೆ. ಮೂರನೇ ಟಿ20 ಪಂದ್ಯದಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದ ಟೀಂ ಇಂಡಿಯಾ, ಇನ್ನೂ ಎರಡು ಪಂದ್ಯಗಳು ಬಾಕಿ ಇರುವಂತೆಯೇ ಸರಣಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. 8 ವಿಕೆಟ್‌ಗಳ ಸುಲಭ ಜಯದೊಂದಿಗೆ ಹರ್ಮನ್‌ಪ್ರೀತ್ ಕೌರ್ ಪಡೆ 3-0 ಮುನ್ನಡೆ ದಾಖಲಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಭಾರತೀಯ ಬೌಲರ್‌ಗಳ ನಿಯಂತ್ರಿತ ದಾಳಿಗೆ ತತ್ತರಿಸಿ ಕೇವಲ 112 ರನ್‌ಗಳಿಗೆ ಆಲೌಟ್ ಆಯಿತು. ಆರಂಭದಲ್ಲಿ ಹಸಿನಿ ಪೆರೆರಾ 25 ರನ್‌ಗಳೊಂದಿಗೆ ವೇಗದ ಆರಂಭ ನೀಡಿದರೂ, ನಾಯಕಿ ಚಾಮರಿ ಅಟಪಟ್ಟು ಬೇಗನೇ ವಿಕೆಟ್ ಒಪ್ಪಿಸಿದರು.

ಇದನ್ನೂ ಓದಿ:

ರೇಣುಕಾ ಸಿಂಗ್ ತಮ್ಮ ಸ್ಪೆಲ್‌ನಲ್ಲಿ ಪ್ರಮುಖ ವಿಕೆಟ್‌ಗಳನ್ನು ಕಬಳಿಸಿ ಲಂಕಾ ಬ್ಯಾಟಿಂಗ್‌ನ್ನು ಕಟ್ಟಿಹಾಕಿದರು. ಮಧ್ಯದಲ್ಲಿ ದೀಪ್ತಿ ಶರ್ಮಾ ದಾಳಿಗಿಳಿದು ನಿರ್ಣಾಯಕ ವಿಕೆಟ್ ಪಡೆದು ತಮ್ಮ 150ನೇ ಟಿ20 ವಿಕೆಟ್ ಮೈಲುಗಲ್ಲು ತಲುಪಿದರು.

ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭದಲ್ಲಿ ಸ್ಮೃತಿ ಮಂಧಾನ ಹಾಗೂ ಜೆಮಿಮಾ ರೋಡ್ರಿಗಸ್ ವಿಕೆಟ್ ಕಳೆದುಕೊಂಡ ಆಘಾತ ಎದುರಾದರೂ, ಶೆಫಾಲಿ ವರ್ಮಾ ಪಂದ್ಯದ ಸ್ವರೂಪವನ್ನೇ ಬದಲಿಸಿದರು. ಕೇವಲ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಶೆಫಾಲಿ, ಅಂತಿಮವಾಗಿ ಅಜೇಯ 79 ರನ್‌ಗಳೊಂದಿಗೆ ತಂಡವನ್ನು 13.2 ಓವರ್‌ಗಳಲ್ಲಿ ಗೆಲುವಿನ ದಡಕ್ಕೆ ಕರೆದೊಯ್ದರು. ನಾಯಕಿ ಹರ್ಮನ್‌ಪ್ರೀತ್ ಕೌರ್ 21 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು.

error: Content is protected !!