ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀಲಂಕಾ ವಿರುದ್ಧ ನಡೆದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಅಮೋಘ ಪ್ರದರ್ಶನ ನೀಡುವ ಮೂಲಕ 3-0 ಅಂತರದ ಕ್ಲೀನ್ ಸ್ವೀಪ್ ಸಾಧಿಸಿದೆ. ಮೊದಲ ಎರಡು ಪಂದ್ಯಗಳಲ್ಲಿ ಕ್ರಮವಾಗಿ 8 ಮತ್ತು 7 ವಿಕೆಟ್‌ಗಳ ಗೆಲುವು ಕಂಡಿದ್ದ ಭಾರತ ತಂಡ, ಅಂತಿಮ ಪಂದ್ಯದಲ್ಲೂ 8 ವಿಕೆಟ್‌ಗಳಿಂದ ಲಂಕನ್ನರನ್ನು ಮಣಿಸಿ ಸರಣಿಯನ್ನು ತನ್ನದಾಗಿಸಿಕೊಂಡಿದೆ.
ಈ ಗೆಲುವಿನೊಂದಿಗೆ ಭಾರತ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಮಹಿಳಾ ಟಿ20 ಕ್ರಿಕೆಟ್ ಇತಿಹಾಸದಲ್ಲೇ ‘ಅತ್ಯಂತ ಯಶಸ್ವಿ ನಾಯಕಿ’ ಎಂಬ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಈ ಮೂಲಕ ಅವರು ವಿಶ್ವ ಕ್ರಿಕೆಟ್‌ನ ದಿಗ್ಗಜ ನಾಯಕಿಯನ್ನು ಹಿಂದಿಕ್ಕಿದ್ದಾರೆ.
ಇಲ್ಲಿಯವರೆಗೆ ಈ ದಾಖಲೆಯು ಆಸ್ಟ್ರೇಲಿಯಾದ ಮಾಜಿ ನಾಯಕಿ ಮೆಗ್ ಲ್ಯಾನಿಂಗ್ ಹೆಸರಿನಲ್ಲಿತ್ತು. ಲ್ಯಾನಿಂಗ್ ಆಸೀಸ್ ತಂಡವನ್ನು 100 ಪಂದ್ಯಗಳಲ್ಲಿ ಮುನ್ನಡೆಸಿ 76 ಗೆಲುವುಗಳನ್ನು ತಂದುಕೊಟ್ಟಿದ್ದರು. ಆದರೆ ಹರ್ಮನ್ ಪ್ರೀತ್ ಕೌರ್ ಈವರೆಗೆ ಭಾರತ ತಂಡವನ್ನು 131 ಪಂದ್ಯಗಳಲ್ಲಿ ಮುನ್ನಡೆಸಿದ್ದು, ಒಟ್ಟು 77 ಗೆಲುವುಗಳನ್ನು ದಾಖಲಿಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಹರ್ಮನ್ ಪ್ರೀತ್ ಕೌರ್: 131 ಪಂದ್ಯಗಳು – 77 ಗೆಲುವುಗಳು (ಹೊಸ ದಾಖಲೆ)
ಮೆಗ್ ಲ್ಯಾನಿಂಗ್: 100 ಪಂದ್ಯಗಳು – 76 ಗೆಲುವುಗಳು
ಮುಂಬರುವ ಟಿ20 ವಿಶ್ವಕಪ್‌ವರೆಗೂ ಹರ್ಮನ್ ಪ್ರೀತ್ ಅವರೇ ಭಾರತ ತಂಡದ ಚುಕ್ಕಾಣಿ ಹಿಡಿಯಲಿದ್ದು, ಈ ದಾಖಲೆಯ ಪಟ್ಟಿ ಮತ್ತಷ್ಟು ವಿಸ್ತಾರವಾಗುವುದರಲ್ಲಿ ಅನುಮಾನವಿಲ್ಲ. ಲಂಕಾ ಸರಣಿಯ ಈ ಗೆಲುವು ಭಾರತ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

