ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇವಲ ಸಂಶಯದ ಆಧಾರದ ಮೇಲೆ ವ್ಯಾಪಾರಕ್ಕೆ ಬಂದಿದ್ದ ಮಹಿಳೆಯರನ್ನು ಮಕ್ಕಳ ಕಳ್ಳರೆಂದು ಭಾವಿಸಿ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿರುವ ಅಮಾನವೀಯ ಘಟನೆ ತಾಲೂಕಿನ ಡೋಣಿ ಗ್ರಾಮದಲ್ಲಿ ಜರುಗಿದೆ.
ಇಬ್ಬರು ಮಹಿಳೆಯರು ಸ್ಟೇಷನರಿ ಸಾಮಗ್ರಿಗಳು ಹಾಗೂ ಆಯುರ್ವೇದಿಕ್ ಪೇನ್ ಕಿಲ್ಲರ್ ಪೌಡರ್ಗಳನ್ನು ಮಾರಾಟ ಮಾಡಲು ಗ್ರಾಮಕ್ಕೆ ಆಗಮಿಸಿದ್ದರು. ಮನೆ ಮನೆಗೆ ತೆರಳಿ ವ್ಯಾಪಾರ ಮಾಡುತ್ತಿದ್ದ ಸಂದರ್ಭದಲ್ಲಿ, ಇವರು ವಸ್ತು ಮಾರುವ ನೆಪದಲ್ಲಿ ಮಕ್ಕಳ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದಾರೆ ಎಂಬ ವದಂತಿ ಗ್ರಾಮದಲ್ಲಿ ಹಬ್ಬಿದೆ.
ತಕ್ಷಣ ಎಚ್ಚೆತ್ತ ಗ್ರಾಮಸ್ಥರು ಇಬ್ಬರು ಮಹಿಳೆಯರನ್ನು ಹಿಡಿದು ಸ್ಥಳೀಯ ಬಸ್ ನಿಲ್ದಾಣಕ್ಕೆ ಕರೆತಂದು ಕೂಡಿ ಹಾಕಿದ್ದಾರೆ. ಮಹಿಳೆಯರು ಎಷ್ಟೇ ಸಮಜಾಯಿಷಿ ನೀಡಲು ಯತ್ನಿಸಿದರೂ ಕೇಳದ ಜನ, ಅವರನ್ನು ತರಾಟೆಗೆ ತೆಗೆದುಕೊಂಡು ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ.
ನಂತರ ಸ್ಥಳಕ್ಕೆ ಬಂದ ಮುಂಡರಗಿ ಪೊಲೀಸರಿಗೆ ಮಹಿಳೆಯರನ್ನು ಒಪ್ಪಿಸಲಾಗಿದೆ. ಸದ್ಯ ಪೊಲೀಸರು ಮಹಿಳೆಯರ ವಿಚಾರಣೆ ನಡೆಸುತ್ತಿದ್ದು, ವದಂತಿಗಳಿಗೆ ಕಿವಿಗೊಟ್ಟು ಕಾನೂನು ಕೈಗೆತ್ತಿಕೊಳ್ಳದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.

