Saturday, December 27, 2025

ಜನರ ನಿದ್ದೆ ಕದ್ದ ಚಿರತೆ ಸೆರೆ: ನಿರಾಳರಾದ ಗ್ರಾಮಸ್ಥರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾಗಮಂಗಲ ತಾಲೂಕಿನ ಹರದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ಆತಂಕ ಮೂಡಿಸಿದ್ದ ಚಿರತೆಯನ್ನು ಅರಣ್ಯ ಇಲಾಖೆ ಯಶಸ್ವಿಯಾಗಿ ಸೆರೆಹಿಡಿದಿದೆ. ಚಿರತೆ ಸಂಚಾರದಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದ ಈ ಭಾಗದ ನಿವಾಸಿಗಳು ಇದೀಗ ಸ್ವಲ್ಪ ನಿರಾಳರಾಗಿದ್ದಾರೆ.

ಗ್ರಾಮದ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿರತೆಯ ಚಲನವಲನ ಹೆಚ್ಚಾಗಿದ್ದು, ಸಾಕು ನಾಯಿಗಳನ್ನು ಎಳೆದೊಯ್ದ ಘಟನೆಗಳು ಗ್ರಾಮಸ್ಥರಲ್ಲಿ ಭೀತಿ ಉಂಟುಮಾಡಿದ್ದವು. ರಾತ್ರಿ ಸಮಯದಲ್ಲಿ ಮನೆ ಹೊರಗೆ ಬರಲು ಕೂಡ ಜನರು ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿತ್ತು. ಚಿರತೆಯನ್ನು ಕಣ್ಣಾರೆ ಕಂಡ ಅನೇಕ ಗ್ರಾಮಸ್ಥರು ತಕ್ಷಣವೇ ನಾಗಮಂಗಲ ತಾಲೂಕು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಕ್ರಮಕ್ಕೆ ಆಗ್ರಹಿಸಿದ್ದರು.

ದೂರುಗಳ ಮೇರೆಗೆ ಅರಣ್ಯ ಇಲಾಖೆ ಬೊಮ್ಮನಹಳ್ಳಿ ಸಮೀಪ ಬೋನನ್ನು ಅಳವಡಿಸಿ ನಿಗಾವಹಿಸಿತ್ತು. ನಿರಂತರ ಪರಿಶೀಲನೆಯ ಬಳಿಕ ಇಂದು ಚಿರತೆ ಬೋನಿಗೆ ಸಿಕ್ಕಿಬಿದ್ದಿದ್ದು, ಈ ಸುದ್ದಿ ತಿಳಿದ ಗ್ರಾಮಸ್ಥರು ಅರಣ್ಯ ಇಲಾಖೆಯ ತ್ವರಿತ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

error: Content is protected !!