ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡಗಳ ನಡುವಿನ ಐದು ಪಂದ್ಯಗಳ ಟಿ20 ಸರಣಿಯಲ್ಲಿ ನಾಲ್ಕನೇ ಪಂದ್ಯಕ್ಕೆ ರೋಚಕ ಹಿನ್ನೆಲೆ ಸಿದ್ಧವಾಗಿದೆ. ಈಗಾಗಲೇ ಮೊದಲ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿರುವ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ತಂಡ ಸರಣಿಯನ್ನು ಕೈವಶ ಮಾಡಿಕೊಂಡಿದ್ದು, ಉಳಿದ ಪಂದ್ಯಗಳಲ್ಲೂ ಪ್ರಾಬಲ್ಯ ಮುಂದುವರೆಸುವ ಗುರಿ ಇಟ್ಟುಕೊಂಡಿದೆ.
ಮುಂದಿನ ವರ್ಷ ನಡೆಯಲಿರುವ ಮಹಿಳಾ ಟಿ20 ವಿಶ್ವಕಪ್‌ಗೆ ತಯಾರಿಯ ಭಾಗವಾಗಿ ಈ ಸರಣಿಯನ್ನು ಭಾರತ ಗಂಭೀರವಾಗಿ ಪರಿಗಣಿಸಿದೆ. ಅದರ ಪರಿಣಾಮವೇ ಮೊದಲ ಪಂದ್ಯದಲ್ಲಿ 8 ವಿಕೆಟ್‌ಗಳ ಗೆಲುವು, ಎರಡನೇ ಪಂದ್ಯದಲ್ಲಿ 7 ವಿಕೆಟ್‌ಗಳ ಜಯ ಮತ್ತು ತಿರುವನಂತಪುರಂನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಮತ್ತೊಮ್ಮೆ 8 ವಿಕೆಟ್‌ಗಳಿಂದಲೂ ಗೆಲುವು ಸಾಧಿಸಿದೆ. ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳು ಉತ್ತಮ ಸಮತೋಲನ ತೋರಿವೆ.
ನಾಲ್ಕನೇ ಟಿ20 ಪಂದ್ಯ ಡಿಸೆಂಬರ್ 28ರಂದು ಅಂದರೆ ಇಂದು ಭಾನುವಾರ ತಿರುವನಂತಪುರಂನ ಗ್ರೀನ್‌ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದ್ದು, ಟಾಸ್ 6.30ಕ್ಕೆ ನಡೆಯಲಿದೆ. ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರವಾಗಿ ವೀಕ್ಷಿಸಬಹುದಾಗಿದೆ. ಜೊತೆಗೆ ಜಿಯೋ-ಹಾಟ್‌ಸ್ಟಾರ್ ಅಪ್ಲಿಕೇಶನ್ ಮೂಲಕ ಮೊಬೈಲ್ ಹಾಗೂ ಡಿಜಿಟಲ್ ವೇದಿಕೆಗಳಲ್ಲೂ ಲೈವ್ ಸ್ಟ್ರೀಮಿಂಗ್ ಲಭ್ಯವಿರಲಿದೆ.

