ಹೊಸದಿಗಂತ ಡಿಜಿಟಲ್ ಡೆಸ್ಕ್:
ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಸಿನಿಮಾ ಬಿಡುಗಡೆಯಾಗಿ ಮೂರು ವಾರಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಈಗ 25ನೇ ದಿನಕ್ಕೂ ಭರ್ಜರಿ ಪ್ರದರ್ಶನ ಮುಂದುವರಿಸಿದೆ. ಆರಂಭದಿಂದಲೇ ಹೌಸ್‌ಫುಲ್ ಶೋಗಳೊಂದಿಗೆ ಗಮನ ಸೆಳೆದ ಈ ಚಿತ್ರ, ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಮಟ್ಟದ ಗಳಿಕೆ ಸಾಧಿಸಿದೆ. 23 ದಿನಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ 668 ಕೋಟಿ ರೂ. ಸಂಗ್ರಹಿಸಿರುವ ಸಿನಿಮಾ, ವಿದೇಶಿ ಆದಾಯ ಸೇರಿಸಿದರೆ ಒಟ್ಟು ಕಲೆಕ್ಷನ್ 1,000 ಕೋಟಿ ರೂ. ಗಡಿ ದಾಟುವ ಹಂತಕ್ಕೆ ತಲುಪಿದೆ.
ಆದಿತ್ಯ ಧಾರ್ ನಿರ್ದೇಶನದ ಈ ಚಿತ್ರವು ದೇಶಭಕ್ತಿಯ ಹಿನ್ನೆಲೆಯ ಕಥೆಯೊಂದಿಗೆ ಪ್ರೇಕ್ಷಕರ ಮನಗೆದ್ದಿದೆ. ಪಾಕಿಸ್ತಾನದಲ್ಲಿ ನಡೆದ ನೈಜ ಘಟನೆಗಳಿಂದ ಪ್ರೇರಿತವಾದ ಕಥಾಹಂದರ ಚಿತ್ರಕ್ಕೆ ಬಲ ನೀಡಿದ್ದು, ಬಾಯಿ ಮಾತಿನ ಪ್ರಚಾರವೂ ದೊಡ್ಡ ಮಟ್ಟದಲ್ಲಿ ಸಹಕಾರಿಯಾಗಿದೆ. ಮೂರನೇ ವಾರದಲ್ಲೂ ಚಿತ್ರ ಮಂದಗೊಳ್ಳದೆ ಸ್ಥಿರ ಆದಾಯ ಕಾಯ್ದುಕೊಂಡಿದೆ.
ಇದನ್ನೂ ಓದಿ:
ಡಿಸೆಂಬರ್ 27ರಂದು ಮಾತ್ರವೇ ಸುಮಾರು 20.50 ಕೋಟಿ ರೂ. ಗಳಿಸಿರುವ ‘ಧುರಂಧರ್’, ವೀಕೆಂಡ್ ಮತ್ತು ಹೊಸ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಇನ್ನಷ್ಟು ವೇಗ ಪಡೆಯುವ ನಿರೀಕ್ಷೆ ಇದೆ. ಭಾನುವಾರವೇ ದೇಶೀಯ ಮಾರುಕಟ್ಟೆಯಲ್ಲಿ 700 ಕೋಟಿ ರೂ. ಗಡಿ ದಾಟುವ ಸಾಧ್ಯತೆ ಹೆಚ್ಚಾಗಿದೆ.
ಹೊಸ ಚಿತ್ರಗಳ ಪೈಪೋಟಿಯ ನಡುವೆಯೂ ‘ಧುರಂಧರ್’ ತನ್ನ ಪ್ರಾಬಲ್ಯ ಕಾಪಾಡಿಕೊಂಡಿದೆ. ರಣವೀರ್ ಸಿಂಗ್ ಜೊತೆಗೆ ಸಾರಾ ಅರ್ಜುನ್, ಅಕ್ಷಯ್ ಖನ್ನಾ, ಸಂಜಯ್ ದತ್ ಮತ್ತು ಅರ್ಜುನ್ ರಾಮ್‌ಪಾಲ್ ಅವರ ಅಭಿನಯಕ್ಕೂ ಉತ್ತಮ ಮೆಚ್ಚುಗೆ ವ್ಯಕ್ತವಾಗಿದೆ. ಹೊಸ ವರ್ಷದ ಆರಂಭದಲ್ಲೂ ಈ ಚಿತ್ರದ ಅಬ್ಬರ ಮುಂದುವರಿಯಲಿದೆ ಎಂಬ ನಿರೀಕ್ಷೆ ಸಿನಿ ವಲಯದಲ್ಲಿದೆ.

