Sunday, December 28, 2025

ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್‌ನಲ್ಲಿ ಎಲ್ಲವೂ ಸರಿಯಿಲ್ಲ: ‘ಗಂಭೀರ’ ಕೋಚಿಂಗ್ ಶೈಲಿ ಬಗ್ಗೆ ಚರ್ಚೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್‌ನಲ್ಲಿ ಇತ್ತೀಚೆಗೆ ಕಾಣಿಸುತ್ತಿರುವ ಅಶಾಂತ ವಾತಾವರಣದ ಹಿಂದೆ ಆಟಗಾರರ ನಡುವಿನ ಭಿನ್ನಾಭಿಪ್ರಾಯವಿಲ್ಲ, ಬದಲಾಗಿ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಕಠಿಣ ಕಾರ್ಯಶೈಲಿಯೇ ಪ್ರಮುಖ ಕಾರಣವಾಗಿರಬಹುದು ಎಂಬ ಅಭಿಪ್ರಾಯಗಳು ಹೊರಬಿದ್ದಿದೆ. 2024ರ ಟಿ20 ವಿಶ್ವಕಪ್ ನಂತರ ಗಂಭೀರ್ ತಂಡದ ಜವಾಬ್ದಾರಿ ವಹಿಸಿಕೊಂಡ ಬಳಿಕ ಪರಿಸ್ಥಿತಿ ನಿಧಾನವಾಗಿ ಬದಲಾಗಿದೆ ಎನ್ನಲಾಗುತ್ತಿದೆ.

ಪಿಟಿಐ ವರದಿ ಪ್ರಕಾರ, ಗಂಭೀರ್ ಕೋಚ್ ಆದ ಬಳಿಕ ಆಟಗಾರರು ತಮ್ಮ ಸ್ಥಾನಗಳ ಬಗ್ಗೆ ಹೆಚ್ಚು ಅಸುರಕ್ಷಿತರಾಗಿದ್ದಾರೆ. ರಾಹುಲ್ ದ್ರಾವಿಡ್ ಅವಧಿಯಲ್ಲಿ ಆಟಗಾರರಿಗೆ ಸ್ಪಷ್ಟ ಪಾತ್ರ, ನಿರಂತರ ಅವಕಾಶ ಮತ್ತು ಆತ್ಮವಿಶ್ವಾಸದ ವಾತಾವರಣ ಇತ್ತು. ಆದರೆ ಈಗ ತಂಡದಲ್ಲಿ ಕಟ್ಟುನಿಟ್ಟಿನ ನಿಯಮಗಳು ಹೆಚ್ಚಾಗಿದ್ದು, ನಿರಂತರ ತಂಡ ಬದಲಾವಣೆಗಳು ಆಟಗಾರರಲ್ಲಿ ಅನಿಶ್ಚಿತತೆ ಮೂಡಿಸಿವೆ.

ಇದನ್ನೂ ಓದಿ:

ವಿಶೇಷವಾಗಿ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಕ್ರಮಾಂಕಗಳನ್ನು ಸ್ಥಿರಗೊಳಿಸದಿರುವುದು ಗೊಂದಲಕ್ಕೆ ಕಾರಣವಾಗಿದೆ. ಆರಂಭಿಕರನ್ನು ಹೊರತುಪಡಿಸಿ ಉಳಿದ ಆಟಗಾರರ ಸ್ಥಾನಗಳು ಆಗಾಗ್ಗೆ ಬದಲಾಗುತ್ತಿದ್ದು, ಇದರಿಂದ ಪ್ರದರ್ಶನದ ಮೇಲೂ ಒತ್ತಡ ಹೆಚ್ಚಾಗಿದೆ. ಶುಭ್‌ಮನ್ ಗಿಲ್, ಸಂಜು ಸ್ಯಾಮ್ಸನ್ ಪ್ರಕರಣಗಳು ಇದಕ್ಕೆ ಉದಾಹರಣೆಗಳಾಗಿವೆ.

ಈ ಬಗ್ಗೆ ಮಾತನಾಡಿರುವ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್, ತಂಡದಲ್ಲಿ “ಭಯ ಮತ್ತು ಅಭದ್ರತೆಯ ವಾತಾವರಣ” ನಿರ್ಮಾಣವಾಗಿದೆ ಎಂದು ಆರೋಪಿಸಿದ್ದಾರೆ. ಇಂತಹ ಪರಿಸ್ಥಿತಿ ಮುಂದುವರಿದರೆ, ಟೀಮ್ ಇಂಡಿಯಾ ಸ್ಥಿರ ಪ್ರದರ್ಶನ ನೀಡಲು ಕಷ್ಟವಾಗಬಹುದು ಎನ್ನುವ ಆತಂಕಗಳು ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿವೆ.

error: Content is protected !!