ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಿತ್ರರಸಿಕರಿಗೆ ಡಿಸೆಂಬರ್ ತಿಂಗಳು ಹಬ್ಬದ ವಾತಾವರಣ ಸೃಷ್ಟಿಸಿದೆ. ದರ್ಶನ್ ಅಭಿನಯದ ‘ಡೆವಿಲ್’ ಚಿತ್ರದ ನಂತರ ಕ್ರಿಸ್‌ಮಸ್ ದಿನವೇ ತೆರೆಕಂಡ ‘ಮಾರ್ಕ್’ ಮತ್ತು ‘45’ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಗಮನ ಸೆಳೆಯುತ್ತಿವೆ. ಒಂದೇ ದಿನ ಬಿಡುಗಡೆಯಾದ ಈ ಎರಡೂ ಚಿತ್ರಗಳು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದು, ಆರಂಭಿಕ ದಿನಗಳಲ್ಲೇ ಉತ್ತಮ ಕಲೆಕ್ಷನ್ ದಾಖಲಿಸಿವೆ.
ಸುದೀಪ್ ಅಭಿನಯದ ‘ಮಾರ್ಕ್’ ಚಿತ್ರ ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿದ್ದು, ತಮಿಳಿನ ಕಲಾವಿದರ ಅಭಿನಯವೂ ವಿಶೇಷವಾಗಿವೆ. ವಿಜಯ್ ಕಾರ್ತಿಕೇಯ ನಿರ್ದೇಶನದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಲಭಿಸಿದೆ. ಬಾಕ್ಸ್ ಆಫೀಸ್ ನಲ್ಲಿ ‘ಮಾರ್ಕ್’ ಸಿನಿಮಾ ಇದುವರೆಗೆ ಸುಮಾರು 18.5 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಮೊದಲ ದಿನವೇ ಚಿತ್ರ 8.6 ಕೋಟಿ ರೂ. ಗಳಿಸಿದ್ದು, ನಂತರದ ದಿನಗಳಲ್ಲೂ ಸರಾಸರಿ ಗಳಿಕೆ ಮುಂದುವರಿದಿದೆ. ಗ್ರಾಸ್ ಕಲೆಕ್ಷನ್ 22 ಕೋಟಿ ರೂಪಾಯಿ ಸಮೀಪಿಸಿದೆ ಎಂದು ವರದಿ ಹೇಳಿದೆ.
ಇನ್ನು ಅರ್ಜುನ್ ಜನ್ಯ ನಿರ್ದೇಶನದ ‘45’ ಚಿತ್ರದಲ್ಲಿ ಉಪೇಂದ್ರ, ಶಿವರಾಜ್‌ಕುಮಾರ್ ಮತ್ತು ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವೂ ಉತ್ತಮ ಆರಂಭ ಪಡೆದು, ಒಟ್ಟಾರೆ ಗ್ರಾಸ್ ಕಲೆಕ್ಷನ್ 15 ಕೋಟಿ ರೂಪಾಯಿ ಹತ್ತಿರ ತಲುಪಿದೆ ಎನ್ನಲಾಗಿದೆ. ಮೊದಲ ದಿನವೇ 6 ಕೋಟಿ ರೂಪಾಯಿ ಗಳಿಸಿದ್ದ ಈ ಸಿನಿಮಾ ಮುಂದಿನ ದಿನಗಳಲ್ಲೂ ಸ್ಥಿರ ಪ್ರದರ್ಶನ ನೀಡುತ್ತಿದೆ.
ಹೊಸ ವರ್ಷದ ರಜೆಗಳ ಹಿನ್ನೆಲೆ ಎರಡೂ ಚಿತ್ರಗಳ ಗಳಿಕೆ ಇನ್ನಷ್ಟು ಹೆಚ್ಚುವ ನಿರೀಕ್ಷೆ ಚಿತ್ರತಂಡಗಳಲ್ಲಿ ಮೂಡಿಸಿದೆ.

