ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಗಾಳಿಯ ಗುಣಮಟ್ಟ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ವಾಯುಮಾಲಿನ್ಯ ಆತಂಕಕಾರಿ ಮಟ್ಟ ತಲುಪಿದ್ದು, ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಲಕ್ಷಣಗಳು ಕಾಣಿಸುತ್ತಿವೆ. ಇಂದಿನ ವಾಯು ಗುಣಮಟ್ಟ ಸೂಚ್ಯಂಕದ ಪ್ರಕಾರ ಬೆಂಗಳೂರಿನ AQI 173 ದಾಖಲಾಗಿದ್ದು, ಇದು ತೀರಾ ಕಳಪೆ ಹಂತದಲ್ಲಿದೆ.
ಪರಿಸರ ಇಲಾಖೆ ಮಾಹಿತಿಯಂತೆ, ಈ ವರ್ಷ ಸೂಕ್ಷ್ಮ ಧೂಳಿಕಣಗಳ ಪ್ರಮಾಣ ಕಳೆದ ನಾಲ್ಕು ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿದೆ. ಇಂದು PM2.5 ಪ್ರಮಾಣ 86 ಮತ್ತು PM10 ಪ್ರಮಾಣ 119 ದಾಖಲಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿರುವ ಸುರಕ್ಷಿತ ಮಿತಿಯನ್ನು ಹಲವು ಪಟ್ಟು ಮೀರಿದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಸ್ವಲ್ಪ ಸುಧಾರಣೆ ಕಂಡರೂ, ಆರೋಗ್ಯಕ್ಕೆ ಇದು ಇನ್ನೂ ಅಪಾಯಕಾರಿಯೇ ಎಂಬ ಎಚ್ಚರಿಕೆ ನೀಡಲಾಗಿದೆ.
ನಗರದ ಸಿಲ್ಕ್ ಬೋರ್ಡ್, ವೈಟ್‌ಫೀಲ್ಡ್ ಸೇರಿದಂತೆ ಸಂಚಾರ ದಟ್ಟಣೆ ಇರುವ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟವು ಸರಾಸರಿಗಿಂತ ಸುಮಾರು 30 ಶೇಕಡಾ ಹೆಚ್ಚು ಕಳಪೆಯಾಗಿದೆ. 1.2 ಕೋಟಿಗೂ ಅಧಿಕ ವಾಹನಗಳಿಂದ ಹೊರಸೂಸುವ ಹೊಗೆ ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದೆ. AQI 150 ಮೀರಿದರೆ ಶ್ವಾಸಕೋಶ ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
ರಾಜ್ಯದ ಇತರ ನಗರಗಳಾದ ಮೈಸೂರು, ಬಳ್ಳಾರಿ, ಬೆಳಗಾವಿ ಸೇರಿದಂತೆ ಹಲವೆಡೆ ಗಾಳಿಯ ಗುಣಮಟ್ಟ ಮಧ್ಯಮದಿಂದ ಅನಾರೋಗ್ಯಕರ ಮಟ್ಟದಲ್ಲಿದ್ದು, ಹೊರಾಂಗಣ ಚಟುವಟಿಕೆಗಳಲ್ಲಿ ಎಚ್ಚರಿಕೆ ವಹಿಸುವಂತೆ ಸಾರ್ವಜನಿಕರಿಗೆ ಸಲಹೆ ನೀಡಲಾಗಿದೆ.

