Monday, December 29, 2025

ಶಿಶುವಿನ ಶವವನ್ನು ಬಾಯಲ್ಲಿ ಕಚ್ಚಿಕೊಂಡು ಓಡಿದ ಬೀದಿ ನಾಯಿ: ದೃಶ್ಯ ನೋಡಿ ಬೆಚ್ಚಿಬಿದ್ದ ಸ್ಥಳೀಯರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ನಾಯಿಯೊಂದು ನವಜಾತ ಶಿಶುವಿನ ಮೃತದೇಹವನ್ನು ಬಾಯಲ್ಲಿ ಹಿಡಿದು ಓಡುತ್ತಿರುವ ದೃಶ್ಯವನ್ನು ಕಂಡ ಜನರು ಬೆಚ್ಚಿಬಿದ್ದಿದ್ದಾರೆ. ಡಿಸೆಂಬರ್ 28ರಂದು ಪರಾಶರಿ ಸ್ಮಶಾನದ ಬಳಿ ಅಂತ್ಯಕ್ರಿಯೆಗೆ ಆಗಮಿಸಿದ್ದವರು ಈ ಭಯಾನಕ ದೃಶ್ಯವನ್ನು ಗಮನಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪ್ರತ್ಯಕ್ಷದರ್ಶಿಗಳ ಹೇಳಿಕೆಯಂತೆ, ಬೆಳಿಗ್ಗೆ ಸಮಯದಲ್ಲಿ ಸ್ಮಶಾನದ ಬಳಿ ಅಲೆದಾಡುತ್ತಿದ್ದ ನಾಯಿಯ ವರ್ತನೆ ಅನುಮಾನಾಸ್ಪದವಾಗಿ ಕಂಡಿತು. ಹತ್ತಿರದಿಂದ ನೋಡಿದಾಗ, ಅದು ಶಿಶುವಿನ ಶವವನ್ನು ಕಚ್ಚಿಕೊಂಡಿರುವುದು ತಿಳಿದುಬಂದಿತು. ಇದರಿಂದ ಸ್ಥಳದಲ್ಲಿ ಆತಂಕ ಮತ್ತು ಗೊಂದಲ ಉಂಟಾಗಿ, ಕೆಲವೇ ಹೊತ್ತಿನಲ್ಲಿ ಜನಸಮೂಹ ಜಮಾಯಿಸಿತು.

ಮಾಹಿತಿ ಪಡೆದ ಗಂಜ್ ಬಸೋಡಾ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ನಾಯಿಯಿಂದ ಶವವನ್ನು ಬೇರ್ಪಡಿಸಿ ವಶಕ್ಕೆ ಪಡೆದ ಪೊಲೀಸರು ತನಿಖೆ ಆರಂಭಿಸಿದರು.

ಸಾಮಾಜಿಕ ಅಥವಾ ಇತರ ಕಾರಣಗಳಿಂದ ಕೆಲವೊಮ್ಮೆ ಶಿಶುಗಳನ್ನು ಸ್ಮಶಾನದ ಬಳಿ ನೆಲದಲ್ಲಿ ಹೂಳುವ ಘಟನೆಗಳು ನಡೆಯುತ್ತವೆ. ಪ್ರಾಣಿಗಳು ನೆಲ ಅಗೆದಾಗ ದೇಹ ಹೊರಬರುವ ಸಾಧ್ಯತೆ ಇರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಿಶುವಿಗೆ ಸುಮಾರು ನಾಲ್ಕರಿಂದ ಐದು ತಿಂಗಳ ವಯಸ್ಸಿರಬಹುದೆಂದು ತಿಳಿದು ಬಂದಿದೆ.

ಮೃತದೇಹ ಅಲ್ಲಿಗೆ ಹೇಗೆ ಬಂದಿತು, ನಿರ್ಲಕ್ಷ್ಯ ಅಥವಾ ಅಪರಾಧ ಕೃತ್ಯವಿದೆಯೇ ಎಂಬುದರ ಬಗ್ಗೆ ಸುತ್ತಮುತ್ತ ವಿಚಾರಣೆ ನಡೆಯುತ್ತಿದೆ. ಶವವನ್ನು ನಿಯಮಾನುಸಾರ ಸಮಾಧಿ ಮಾಡಲಾಗಿದ್ದು, ತನಿಖೆ ಪೂರ್ಣಗೊಂಡ ಬಳಿಕ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!