ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಚಿತ್ರರಂಗದಲ್ಲಿ ಒಂದು ಸಿನಿಮಾ ಸಾವಿರ ಕೋಟಿ ಗಳಿಸಿದರೆ ಅದನ್ನೇ ಅತಿದೊಡ್ಡ ಸಾಧನೆ ಎಂದು ಸಂಭ್ರಮಿಸಲಾಗುತ್ತದೆ. ಆದರೆ, ನೆರೆಯ ಚೀನಾದ ಅನಿಮೇಷನ್ ಚಿತ್ರವೊಂದು ಸಿನೆಮಾ ಲೋಕದ ಲೆಕ್ಕಾಚಾರವನ್ನೇ ಉಲ್ಟಾ ಮಾಡಿದೆ. ಯಾವುದೇ ದೊಡ್ಡ ಸ್ಟಾರ್ ನಟರಿಲ್ಲದಿದ್ದರೂ, ಕೇವಲ ಕಥೆ ಮತ್ತು ಅನಿಮೇಷನ್ ಶಕ್ತಿಯಿಂದ ‘ನೆ ಜ್ಹಾ 2’ (Ne Zha 2) ಸಿನಿಮಾ ಬರೋಬ್ಬರಿ 18,000 ಕೋಟಿ ರೂಪಾಯಿ ಗಳಿಸುವ ಮೂಲಕ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಸಂಚಲನ ಮೂಡಿಸಿದೆ.
ಜೇಮ್ಸ್ ಕ್ಯಾಮರೂನ್ ಅವರ ‘ಅವತಾರ್’, ಟಾಮ್ ಕ್ರೂಸ್ ಅವರ ‘ಮಿಷನ್ ಇಂಪಾಸಿಬಲ್’ ಹಾಗೂ ‘ಸ್ಪೈಡರ್ ಮ್ಯಾನ್’ ನಂತಹ ಬೃಹತ್ ಬಜೆಟ್‌ನ ಹಾಲಿವುಡ್ ಸಿನಿಮಾಗಳು ಮಾಡಿದ್ದ ದಾಖಲೆಗಳನ್ನು ಈ ಚೀನೀ ಸಿನಿಮಾ ಸಲೀಸಾಗಿ ಹಿಂದಿಕ್ಕಿದೆ. ವಿಶೇಷವೆಂದರೆ, ಈ ಸಿನಿಮಾದ ನಿರ್ಮಾಣ ವೆಚ್ಚ ಕೇವಲ 71 ಕೋಟಿ ರೂಪಾಯಿಗಳು. ಅಲ್ಪ ಬಜೆಟ್‌ನಲ್ಲಿ ತಯಾರಾಗಿ ಸಾವಿರಾರು ಪಟ್ಟು ಲಾಭ ತಂದುಕೊಡುವ ಮೂಲಕ ಇದು ವಿಶ್ವದ ಅತ್ಯಂತ ಯಶಸ್ವಿ ಸಿನಿಮಾಗಳ ಪಟ್ಟಿಗೆ ಸೇರ್ಪಡೆಯಾಗಿದೆ.
ಭಾರತದ ‘ಚೋಟಾ ಭೀಮ್’ ಪಾತ್ರದಂತೆಯೇ, ಈ ಸಿನಿಮಾದಲ್ಲೂ ಒಬ್ಬ ಪುಟ್ಟ ಬಾಲಕ ತನ್ನ ವಯಸ್ಸು ಮತ್ತು ಗಾತ್ರಕ್ಕೆ ಮೀರಿದ ಅದ್ಭುತ ಸಾಹಸಗಳನ್ನು ಮಾಡುವ ಕಥೆಯಿದೆ. ಆಕ್ಷನ್ ಮತ್ತು ಕಲ್ಪನಾ ಲೋಕದ ಅದ್ಭುತ ಸಮ್ಮಿಶ್ರಣವಾಗಿರುವ ಈ ಸಿನಿಮಾ, 2025ರ ಜನವರಿ 29ರಂದು ಬಿಡುಗಡೆಯಾಗಿತ್ತು. ಅಂದಿನಿಂದ ಇಂದಿನವರೆಗೂ ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದು, ಒಟ್ಟು ಕಲೆಕ್ಷನ್ 25,000 ಕೋಟಿ ರೂಪಾಯಿ ತಲುಪುವ ಅಂದಾಜಿದೆ.
‘ನೆ ಜ್ಹಾ 2’ ಸಿನಿಮಾ ಕಳೆದ ಏಪ್ರಿಲ್ ತಿಂಗಳಲ್ಲಿ ಭಾರತದಲ್ಲೂ ಬಿಡುಗಡೆಯಾಗಿತ್ತು. ವಾರ್ನರ್ ಬ್ರದರ್ಸ್ ಮತ್ತು ಎನ್ಕೋರ್ ಸಂಸ್ಥೆಗಳು ಇದನ್ನು ವಿತರಿಸಿದ್ದವು. ಆದರೆ, ಕೇವಲ ಹಿಂದಿ ಆವೃತ್ತಿಯಲ್ಲಿ ಮಾತ್ರ ಬಿಡುಗಡೆಯಾಗಿದ್ದರಿಂದ ಮತ್ತು ಪ್ರಚಾರದ ಕೊರತೆಯಿಂದಾಗಿ ಭಾರತೀಯ ಪ್ರೇಕ್ಷಕರನ್ನು ಸೆಳೆಯುವಲ್ಲಿ ಈ ಚಿತ್ರ ವಿಫಲವಾಯಿತು.
ಪ್ರಸ್ತುತ ಈ ಸಿನಿಮಾ ಎಚ್ಬಿಓ ಮ್ಯಾಕ್ಸ್, ನೆಟ್ಫ್ಲಿಕ್ಸ್ ಹಾಗೂ ಅಮೆಜಾನ್ ಪ್ರೈಂಗಳಲ್ಲಿ ಲಭ್ಯವಿದ್ದರೂ, ಭಾರತದ ವೀಕ್ಷಕರಿಗೆ ತಾಂತ್ರಿಕ ಕಾರಣಗಳಿಂದ ಇನ್ನು ವೀಕ್ಷಣೆಗೆ ಸಿಗುತ್ತಿಲ್ಲ. ಆದರೆ ವಿಶ್ವಮಟ್ಟದಲ್ಲಿ ಈ ಸಿನಿಮಾ ಮಾಡುತ್ತಿರುವ ಸದ್ದನ್ನು ಗಮನಿಸಿದರೆ, ಶೀಘ್ರದಲ್ಲೇ ಭಾರತದ ಒಟಿಟಿ ವೇದಿಕೆಗಳಲ್ಲೂ ಇದು ಲಭ್ಯವಾಗುವ ಸಾಧ್ಯತೆಯಿದೆ.

