Tuesday, December 30, 2025

ರಾಜ್ಯದಲ್ಲಿರುವ ಸರ್ಕಾರ ಕೇರಳದ್ದಾ? ಕರ್ನಾಟಕದ್ದಾ?: ಆರ್​. ಅಶೋಕ್ ಕಿಡಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಕೋಗಿಲು ಕ್ರಾಸ್ ಬಡಾವಣೆಯಲ್ಲಿ ಅಕ್ರಮ ಶೆಡ್​​ಗಳ ತೆರವು ರಾಜ್ಯ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ.

ಯಾವ ಕಾನೂನಿನಡಿಯಲ್ಲೂ ಅವರಿಗೆ ಮನೆ ಕೊಡಲು ಸಾಧ್ಯವೇ ಇಲ್ಲ. ಕನ್ನಡಿಗರ ನೆಲ ಪರಭಾರೆ ಮಾಡುವ ಅಧಿಕಾರ ನಿಮಗೆ ಯಾರು ಕೊಟ್ಟರು? ರಾಜ್ಯದಲ್ಲಿರುವ ಸರ್ಕಾರ ಕೇರಳದ್ದಾ ಅಥವಾ ಕರ್ನಾಟಕದ್ದಾ ಎಂದು ವಿಪಕ್ಷ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಕೋಗಿಲು ಅಕ್ರಮ ವಲಸಿಗರ ಮನೆ ತೆರವು ವಿಚಾರವಾಗಿ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್​​, ಕೋಗಿಲು ಲೇಔಟ್​ನಲ್ಲಿ ಅನಧಿಕೃತ ಮನೆಗಳ ತೆರವು ಸಂಬಂಧಿಸಿದ ದಾಖಲೆಗಳ ಬಿಡುಗಡೆ ಮಾಡಿದ್ದಾರೆ. ಮನೆ ಹಂಚಿಕೆ ವಿಚಾರ ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗಿಬಿಟ್ಟಿದೆ. ಈಗ ಪಾಕಿಸ್ತಾನಕ್ಕೂ ನಮ್ಮನ್ನು ಕಾಂಗ್ರೆಸ್​ನವರು ಅಡವಿಟ್ಟುಬಿಟ್ರಾ? ಪಾಕಿಸ್ತಾನದವರು ಕರ್ನಾಟಕದ ಬಗ್ಗೆಯೇ ಯಾಕೆ ಮಾತಾಡುತ್ತಾರೆ? ಪಾಕ್​ನವರು ಮಹಾರಾಷ್ಟ್ರ, ತಮಿಳುನಾಡು ಬಗ್ಗೆ ಯಾಕೆ ಮಾತಾಡಲ್ಲ. ಸಿಎಂ, ಡಿಸಿಎಂ ಜಗಳದಲ್ಲಿ ನಾವು ದುರಂತದ ತುದಿಗೆ ಬಂದು ಬಿಟ್ಟಿದ್ದೇವೆ. ಬಾಂಗ್ಲಾದವರಿಗೆ ಜಮೀನು‌ ಕೊಡುತ್ತೀರಿ ಅಂತಾದರೆ ನಾಚಿಕೆ ಆಗಬೇಕು ಎಂದು ಕಿಡಿಕಾರಿದ್ದಾರೆ.

ಕೋಗಿಲು ಲೇಔಟ್​ ನಿವಾಸಿಗಳಿಗೆ ಮನೆ ಹಂಚಿಕೆ ವಿಚಾರವಾಗಿ ಕೋರ್ಟ್​ ಮೊರೆ ಹೋಗುವ ಸಂಬಂಧ ಚರ್ಚೆ ನಡೆಸಿದ್ದೇವೆ. ಈಗಾಗಲೇ ಈ ಬಗ್ಗೆ ಕಾನೂನು ತಂಡಕ್ಕೆ ಸೂಚನೆ ನೀಡಿದ್ದೇನೆ. ವಿಜಯಪುರ ಜಿಲ್ಲೆಯ ಆಲಮಟ್ಟಿ, ಕೊಡಗು ಸೇರಿದಂತೆ ರಾಜ್ಯದಲ್ಲಿರುವ ಸಂತ್ರಸ್ತರಿಗೆ ಮನೆ ಕೊಡಲು ಯೋಗ್ಯತೆ ಇಲ್ಲ ಎಂದಿದ್ದಾರೆ.

ಇದು ವಕ್ಫ್ ಬೋರ್ಡ್ ಆಸ್ತಿ ಅಲ್ಲ, ಸರ್ಕಾರಿ ಭೂಮಿ. ವಕ್ಫ್ ಬೋರ್ಡ್ ಆಸ್ತಿ ಇದೆ ಅಲ್ವಾ, ಅದರಲ್ಲಿ ಮನೆ ಕಟ್ಟಿಕೊಡಿ. ಕೋಗಿಲು ಲೇಔಟ್​ನಲ್ಲಿರೋದು 650 ಕೋಟಿ ರೂ ಮೌಲ್ಯದ ಭೂಮಿ ಇದೆ. ಅನಧಿಕೃತ ಮನೆ ನಿರ್ಮಾಣ ಬಗ್ಗೆ ಒಂದು ವರ್ಷದ ಹಿಂದೆ ಅಂದರೆ ಸೆ.12ರಂದು BBMP ಜಂಟಿ ಆಯುಕ್ತರಿಗೆ ತಹಶೀಲ್ದಾರ್ ಪತ್ರ ಬರೆದಿದ್ದಾರೆ. ಈಗ ಮನೆ ಕಟ್ಟಿಕೊಡಿ ಅಂತಾ ಯಾರು ಹೇಳಿದರು. ಆಶ್ರಯ ಯೋಜನೆಯಡಿ ಕೊಟ್ಟರೆ ಶಾಸಕರ ಅಧ್ಯಕ್ಷತೆಯಲ್ಲಿ ಕೊಡಬೇಕು. ನನಗೆ ಗೊತ್ತಿರುವ ಪ್ರಕಾರ ಬ್ಯಾಟರಾಯನಪುರ ಶಾಸಕ ವಿದೇಶದಲ್ಲಿದ್ದಾರೆ ಎಂದು ಕಿಡಿಕಾರಿದರು.

ಕೋಗಿಲು ಸರ್ವೆ ನಂಬರ್ 99ರ ಜಮೀನು ಇದು. ಕಲ್ಲು ಬಂಡೆ ಜಾಗವನ್ನು ಸರ್ಕಾರ ಖಾಸಗಿ ವ್ಯಕ್ತಿಗೆ ಲೀಸ್​ಗೆ ಕೊಟ್ಟಿತ್ತು. ಕಳೆದ 20 ವರ್ಷಗಳಿಂದ ವಾಸವಿದ್ದಾರೆ ಅಂತಾ ಹೇಳುತ್ತಿದ್ದಾರೆ. 2023ರ ಸ್ಯಾಟಲೈಟ್ ಮ್ಯಾಪ್ ಪ್ರಕಾರ ಜಾಗ ಖಾಲಿ ಇತ್ತು. ಆ ಜಾಗದಲ್ಲಿ ಪಾಲಿಕೆಯವರು ಕಸ ಹಾಕುತ್ತಿದ್ದರು, ನೀರು ತುಂಬಿತ್ತು. 2025ರ ಸ್ಯಾಟಲೈಟ್ ಮ್ಯಾಪ್ ಪ್ರಕಾರ ಆ ಜಾಗದಲ್ಲಿ ಮನೆ ಕಟ್ಟಿದ್ದಾರೆ. ಆರು ತಿಂಗಳ‌ ಹಿಂದೆ ಮಣ್ಣು ತುಂಬಿ ಮನೆ ಕಟ್ಟಿದ್ದಾರೆ. ಕಾಂಗ್ರೆಸ್ ನಾಯಕ ವಾಸೀಂ ಅಗ್ರಿಮೆಂಟ್ ಮಾಡಿಕೊಟ್ಟಿದ್ದಾನೆ. ಎಲ್ಲರ ಹತ್ತಿರ 4-5 ಲಕ್ಷ ಹಣ ಪಡೆದು ಅಗ್ರಿಮೆಂಟ್ ಮಾಡಿಕೊಟ್ಟಿದ್ದಾನೆ. ಈ ಎಲ್ಲಾ ಮಾಹಿತಿಗಳೂ ಅಧಿಕಾರಿಗಳ ಬಳಿ ಇದೆ ಎಂದು ಆರ್​​ ಅಶೋಕ್​ ಆರೋಪಿಸಿದ್ದಾರೆ.

error: Content is protected !!