Wednesday, December 31, 2025

ಅಬುಧಾಬಿ ಮೈದಾನದಲ್ಲಿ ಗೌಸ್ ಅಬ್ಬರ: ಸಿಡಿಲಬ್ಬರದ ಶತಕಕ್ಕೆ ಹಳೆಯ ದಾಖಲೆಗಳು ಉಡೀಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಬುಧಾಬಿಯ ಶೇಖ್ ಝಾಯೆದ್ ಮೈದಾನ ಸಾಕ್ಷಿಯಾದದ್ದು ಒಂದು ಐತಿಹಾಸಿಕ ಬ್ಯಾಟಿಂಗ್ ಸೊಬಗಿಗೆ! ಇಂಟರ್​ನ್ಯಾಷನಲ್ ಲೀಗ್ ಟಿ20 ಟೂರ್ನಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಸರ್ಟ್ ವೈಪರ್ಸ್ ತಂಡದ ಆಂಡ್ರೀಸ್ ಗೌಸ್ ಎದುರಾಳಿ ಬೌಲರ್‌ಗಳನ್ನು ಅಕ್ಷರಶಃ ಬೆಂಡೆತ್ತಿದ್ದಾರೆ. ಕೇವಲ ಶತಕವಲ್ಲ, ಲೀಗ್ ಇತಿಹಾಸದಲ್ಲೇ ಅತೀ ಹೆಚ್ಚು ವೈಯಕ್ತಿಕ ರನ್ ಬಾರಿಸಿದ ಹೊಸ ಮೈಲಿಗಲ್ಲನ್ನು ಅವರು ಸ್ಥಾಪಿಸಿದ್ದಾರೆ.

ಈ ಹಿಂದೆ 2023ರಲ್ಲಿ ಅಲೆಕ್ಸ್ ಹೇಲ್ಸ್ ಬಾರಿಸಿದ್ದ 110 ರನ್ ಈ ಟೂರ್ನಿಯ ಗರಿಷ್ಠ ಮೊತ್ತವಾಗಿತ್ತು. ಆದರೆ, ಆಂಡ್ರೀಸ್ ಗೌಸ್ ಈ ಪಂದ್ಯದಲ್ಲಿ ಎದುರಿಸಿದ 58 ಎಸೆತಗಳಲ್ಲಿ 9 ಭರ್ಜರಿ ಸಿಕ್ಸರ್ ಹಾಗೂ 7 ಬೌಂಡರಿಗಳ ನೆರವಿನಿಂದ ಅಜೇಯ 120 ರನ್ ಚಚ್ಚುವ ಮೂಲಕ ಹೇಲ್ಸ್ ದಾಖಲೆಯನ್ನು ಇತಿಹಾಸದ ಪುಟ ಸೇರಿಸಿದ್ದಾರೆ.

ಟಾಸ್ ಗೆದ್ದ ಎಂಐ ಎಮಿರೇಟ್ಸ್ ನಾಯಕ ಕೀರನ್ ಪೊಲಾರ್ಡ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ಕೈಗೊಂಡಿದ್ದರು. ಆದರೆ ಗೌಸ್ ಅವರ ಬ್ಯಾಟಿಂಗ್ ಚಂಡಮಾರುತಕ್ಕೆ ಈ ನಿರ್ಧಾರ ಉಲ್ಟಾ ಹೊಡೆಯಿತು. ವೈಪರ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ ಕೇವಲ 1 ವಿಕೆಟ್ ನಷ್ಟಕ್ಕೆ ಬರೋಬ್ಬರಿ 233 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತು.

234 ರನ್‌ಗಳ ಬೆಟ್ಟದಂತಹ ಗುರಿಯನ್ನು ಬೆನ್ನತ್ತಿದ ಎಂಐ ಎಮಿರೇಟ್ಸ್, ಹೋರಾಟ ನಡೆಸಿದರೂ 20 ಓವರ್‌ಗಳಲ್ಲಿ 188 ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಪರಿಣಾಮವಾಗಿ 45 ರನ್‌ಗಳ ಭರ್ಜರಿ ಜಯ ಸಾಧಿಸಿದ ಡೆಸರ್ಟ್ ವೈಪರ್ಸ್ ಹೆಮ್ಮೆಯಿಂದ ಫೈನಲ್‌ ಹಂತಕ್ಕೆ ಪ್ರವೇಶಿಸಿದೆ.

error: Content is protected !!