ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾವುದೇ ಅಬ್ಬರದ ಪ್ರಚಾರವಿಲ್ಲದೆ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟ ‘ಧುರಂಧರ್’ ಸಿನಿಮಾ ಇಂದು ಭಾರತೀಯ ಚಿತ್ರರಂಗವೇ ಬೆರಗಾಗುವಂತೆ ಮಾಡುತ್ತಿದೆ. 2025ರ ಸಾಲಿನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಚಿತ್ರ, ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ಬಿಡುಗಡೆಯಾಗಿ 27 ದಿನಗಳಾದರೂ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡುತ್ತಿರುವುದು ಈ ಚಿತ್ರದ ತಾಕತ್ತನ್ನು ತೋರಿಸುತ್ತಿದೆ.
ನಿರ್ದೇಶಕ ಆದಿತ್ಯ ಧಾರ್ ಅವರ ದಕ್ಷ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾ ಭಾರತದ ಮಾರುಕಟ್ಟೆಯಲ್ಲಿ ಈಗಾಗಲೇ 712 ಕೋಟಿ ರೂಪಾಯಿಗಳಿಗೂ ಅಧಿಕ ಹಣ ಬಾಚಿಕೊಂಡಿದೆ. ವಿದೇಶಿ ಮಾರುಕಟ್ಟೆಯನ್ನು ಸೇರಿಸಿದರೆ ಒಟ್ಟು ಕಲೆಕ್ಷನ್ 1000 ಕೋಟಿ ದಾಟಿದೆ! ವಾರದ ದಿನಗಳಲ್ಲೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾ, ಶೀಘ್ರದಲ್ಲೇ 800 ಕೋಟಿಯ ಗಡಿ ದಾಟುವ ಮುನ್ಸೂಚನೆ ನೀಡಿದೆ.
ಈ ಸಿನಿಮಾದ ಗೆಲುವಿನಲ್ಲಿ ನಟ ಅಕ್ಷಯ್ ಖನ್ನಾ ಅವರ ಪಾತ್ರ ದೊಡ್ಡದಿದೆ. ‘ರೆಹಮಾನ್ ಡಕಾಯಿತ್’ ಎಂಬ ಖಳನಾಯಕನ ಪಾತ್ರದಲ್ಲಿ ಅವರು ಅಕ್ಷರಶಃ ಜೀವಿಸಿದ್ದಾರೆ. ಇನ್ನುಳಿದಂತೆ ಅರ್ಜುನ್ ರಾಮ್‌ಪಾಲ್, ಸಂಜಯ್ ದತ್ ಮತ್ತು ಸಾರಾ ಅರ್ಜುನ್ ಅವರ ನಟನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಗೆಲುವಿನಿಂದ ನಟ ರಣವೀರ್ ಸಿಂಗ್ ಅವರ ಸ್ಟಾರ್ ಇಮೇಜ್ ಮತ್ತೊಂದು ಹಂತಕ್ಕೆ ತಲುಪಿದೆ.
ವಿಶೇಷವೆಂದರೆ, ‘ಧುರಂಧರ್’ ಬಿಡುಗಡೆಯಾದ ಬಳಿಕ ಬಂದ ‘ದಿ ಡೆವಿಲ್’, ‘ಅಖಂಡ 2’, ‘ಅವತಾರ್ 3’ ಮತ್ತು ‘45’ ನಂತಹ ದೊಡ್ಡ ಬಜೆಟ್ ಸಿನಿಮಾಗಳು ಕೂಡ ಇದರ ಹವಾ ಕುಗ್ಗಿಸಲು ಸಾಧ್ಯವಾಗಲಿಲ್ಲ. ದೇಶಭಕ್ತಿಯ ಕಥಾಹಂದರ ಹಾಗೂ ಪಾಕಿಸ್ತಾನದಲ್ಲಿ ನಡೆಯುವ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯ ರೋಚಕ ದೃಶ್ಯಗಳು ಜನರನ್ನು ಚಿತ್ರಮಂದಿರಕ್ಕೆ ಸೆಳೆಯುತ್ತಿವೆ.

