ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಿಂದ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಖಾಟ್ ಎಲೆಗಳ ಅಕ್ರಮ ಸಾಗಣೆ ಅಂತಾರಾಷ್ಟ್ರೀಯ ಜಾಲವನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಭೇದಿಸಿದೆ.
ಈ ಕಾರ್ಯಾಚರಣೆಯಲ್ಲಿ ಸುಮಾರು 160 ಕಿಲೋಗ್ರಾಂ ತೂಕದ ಖಾಟ್ ಎಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಮೌಲ್ಯವು ಸುಮಾರು 8 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
2018ರಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಖಾಟ್ ಅನ್ನು ಮಾದಕ ವಸ್ತು ಪಟ್ಟಿಗೆ ಸೇರಿಸಲಾಗಿತ್ತು. ಆ ಬಳಿಕ ಇಷ್ಟು ದೊಡ್ಡ ಪ್ರಮಾಣದಲ್ಲಿ ಖಾಟ್ ಎಲೆಗಳನ್ನು ವಶಪಡಿಸಿಕೊಂಡಿರೋದು ರಾಜ್ಯದಲ್ಲಿ ಇದೇ ಮೊದಲು ಎಂದು ಎನ್ಸಿಬಿ ತಿಳಿಸಿದೆ.
ಈ ಅಕ್ರಮ ವಸ್ತುಗಳನ್ನು ಇಥಿಯೋಪಿಯಾದಿಂದ ಕೀನ್ಯಾ ಮೂಲಕ ಭಾರತಕ್ಕೆ ಅಂತಾರಾಷ್ಟ್ರೀಯ ಮಾರ್ಗದಲ್ಲಿ ಕಳ್ಳಸಾಗಣೆ ಮಾಡಲಾಗುತ್ತಿತ್ತು ಎನ್ನಲಾಗಿದ್ದು, ಸುಮಾರು 20ಕ್ಕೂ ಹೆಚ್ಚು ದೇಶಗಳಲ್ಲಿ ಈ ಜಾಲ ಸಕ್ರಿಯವಾಗಿರುವ ಮಾಹಿತಿ ದೊರೆತಿದೆ. ಈ ಜಾಲವು ಉತ್ತರ ಅಮೆರಿಕಾ, ಯುರೋಪ್, ಗಲ್ಫ್ ರಾಷ್ಟ್ರಗಳು ಮತ್ತು ಮಧ್ಯಪ್ರಾಚ್ಯಕ್ಕೆ ಸುಮಾರು 2,100 ಕಿಲೋಗ್ರಾಂ ತೂಕದ 550ಕ್ಕೂ ಹೆಚ್ಚು ಪಾರ್ಸೆಲ್ಗಳನ್ನು ಕಳುಹಿಸಿದೆ ಎಂದು ಎನ್ಸಿಬಿ ತಿಳಿಸಿದೆ.

