ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಡೇಮಿಯನ್ ಮಾರ್ಟಿನ್ ಗಂಭೀರ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ಪ್ರಸ್ತುತ ಕೋಮಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೆನಿಂಜೈಟಿಸ್ ಕಾಯಿಲೆಯಿಂದ ಬಳಲುತ್ತಿದ್ದ ಅವರ ಸ್ಥಿತಿ ಚಿಕಿತ್ಸೆ ವೇಳೆ ಮತ್ತಷ್ಟು ತೀವ್ರಗೊಂಡಿದೆ ಎಂದು ವರದಿಯಾಗಿದೆ.
ದಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಪ್ರಕಾರ, ಮಾರ್ಟಿನ್ ಅವರಿಗೆ ಮೆನಿಂಜೈಟಿಸ್ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಸಂದರ್ಭ ಔಷಧಿಗಳಿಗೆ ಉಂಟಾದ ರಿಯಾಕ್ಷನ್ ಕಾರಣದಿಂದ ಅವರ ಸ್ಥಿತಿ ತೀವ್ರಗೊಂಡಿದೆ. ವೈದ್ಯರು ಅವರ ಆರೋಗ್ಯವನ್ನು ನಿಕಟವಾಗಿ ಗಮನಿಸುತ್ತಿದ್ದು, ಅಗತ್ಯವಿರುವ ಎಲ್ಲಾ ಉನ್ನತ ಮಟ್ಟದ ಚಿಕಿತ್ಸೆಯನ್ನು ನೀಡಲಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಆಸ್ಟ್ರೇಲಿಯಾ ತಂಡದ ಮಾಜಿ ವಿಕೆಟ್‌ಕೀಪರ್ ಬ್ಯಾಟರ್ ಆ್ಯಡಂ ಗಿಲ್‌ಕ್ರಿಸ್ಟ್, “ಡೇಮಿಯನ್ ಮಾರ್ಟಿನ್ ಅವರಿಗೆ ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ತಿಳಿಸಿದ್ದಾರೆ.
ಡೇಮಿಯನ್ ಮಾರ್ಟಿನ್ ಅವರು ಸುಮಾರು 18 ವರ್ಷಗಳ ಕಾಲ ಕ್ರಿಕೆಟ್ ವೃತ್ತಿಯಲ್ಲಿ ಸಕ್ರಿಯರಾಗಿದ್ದರು. 1991–92ರಲ್ಲಿ ಆರಂಭವಾದ ಅವರ ವೃತ್ತಿ ಜೀವನ 2010ರವರೆಗೆ ಮುಂದುವರಿದಿದ್ದು, ಈ ಅವಧಿಯಲ್ಲಿ ಒಟ್ಟು 509 ಪಂದ್ಯಗಳಲ್ಲಿ ಪಾಲ್ಗೊಂಡಿದ್ದರು. 54 ಶತಕಗಳೊಂದಿಗೆ 23 ಸಾವಿರಕ್ಕೂ ಅಧಿಕ ರನ್ ಗಳಿಸುವ ಮೂಲಕ ಅವರು ಗಮನಾರ್ಹ ಸಾಧನೆ ಮಾಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಾರ್ಟಿನ್ 67 ಟೆಸ್ಟ್ ಪಂದ್ಯಗಳಲ್ಲಿ 109 ಇನಿಂಗ್ಸ್‌ಗಳ ಮೂಲಕ 4,406 ರನ್ ಗಳಿಸಿದ್ದಾರೆ. ಇದರಲ್ಲಿ 13 ಶತಕ ಮತ್ತು 23 ಅರ್ಧಶತಕಗಳು ಸೇರಿವೆ. ಏಕದಿನ ಕ್ರಿಕೆಟ್‌ನಲ್ಲಿ 208 ಪಂದ್ಯಗಳಲ್ಲಿ 182 ಇನಿಂಗ್ಸ್ ಆಡಿದ ಅವರು, 5 ಶತಕಗಳೊಂದಿಗೆ 5,346 ರನ್ ಗಳಿಸಿದ್ದರು. ಅಲ್ಲದೆ ಆಸ್ಟ್ರೇಲಿಯಾ ಪರ ನಾಲ್ಕು ಟಿ20 ಪಂದ್ಯಗಳನ್ನೂ ಆಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲೂ ಅವರು ರಾಜಸ್ಥಾನ್ ರಾಯಲ್ಸ್ ಪರ ಒಂದು ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು.

