Thursday, January 1, 2026

ಹೊಸ ವರುಷದಲ್ಲೂ ಹಳೆ ಚಾಳಿ: ಭಾರತದ ವಿರುದ್ಧ ಮತ್ತೆ ವಿಷ ಕಾರಿದ ಪಾಕ್ ಸೇನಾ ಮುಖ್ಯಸ್ಥ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೊಸ ವರ್ಷದ ಸಂದರ್ಭದಲ್ಲಿ ಜಗತ್ತಿನೆಲ್ಲೆಡೆ ಶಾಂತಿ ಮತ್ತು ಸೌಹಾರ್ದತೆಯ ಆಶಯಗಳು ಕೇಳಿಬರುತ್ತಿದ್ದರೆ, ನೆರೆಯ ಪಾಕಿಸ್ತಾನ ಮಾತ್ರ ಮತ್ತೆ ತನ್ನ ದ್ವೇಷದ ರಾಜಕಾರಣವನ್ನು ಮುಂದುವರಿಸಿದೆ. ಪಾಕಿಸ್ತಾನದ ನೂತನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರು ಭಾರತದ ಹೆಸರನ್ನು ನೇರವಾಗಿ ಉಲ್ಲೇಖಿಸದೆ ಪರೋಕ್ಷವಾಗಿ ಬೆದರಿಕೆ ಹಾಕುವ ಮೂಲಕ ಹೊಸ ವರ್ಷವನ್ನು ವಿವಾದಾತ್ಮಕವಾಗಿ ಆರಂಭಿಸಿದ್ದಾರೆ.

ಇತ್ತೀಚೆಗಷ್ಟೇ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಅಸಿಮ್ ಮುನೀರ್, ಗುಜ್ರಾನ್‌ವಾಲಾ ಮತ್ತು ಸಿಯಾಲ್‌ಕೋಟ್ ಸೇನಾ ನೆಲೆಗಳಿಗೆ ಭೇಟಿ ನೀಡಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದರು. “ಪಾಕಿಸ್ತಾನದ ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ತರುವ ಯಾವುದೇ ಪ್ರಯತ್ನ ನಡೆದರೆ ನಾವು ತೀಕ್ಷ್ಣ ಪ್ರತಿಕ್ರಿಯೆ ನೀಡುತ್ತೇವೆ” ಎಂದು ಎಚ್ಚರಿಸಿದ್ದಾರೆ. ದೇಶದ ಸಾರ್ವಭೌಮತ್ವಕ್ಕಾಗಿ ಯಾವುದೇ ಹಂತಕ್ಕೆ ಹೋಗಲು ಸಿದ್ಧವಿರುವುದಾಗಿ ಹೇಳುವ ಮೂಲಕ ಅವರು ಭಾರತದ ವಿರುದ್ಧ ಆಕ್ರಮಣಕಾರಿ ನಿಲುವನ್ನು ಪ್ರದರ್ಶಿಸಿದ್ದಾರೆ.

ಮತ್ತೊಂದೆಡೆ, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಭಾರತದ ಪಂಜಾಬ್ ಪ್ರಾಂತ್ಯದಲ್ಲಿ ಅಶಾಂತಿ ಸೃಷ್ಟಿಸಲು ನಿರಂತರ ಸಂಚು ರೂಪಿಸುತ್ತಿದೆ ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಗಂಭೀರ ಆರೋಪ ಮಾಡಿದ್ದಾರೆ.

ಗಡಿಯಾಚೆಯಿಂದ ಡ್ರೋನ್‌ಗಳ ಮೂಲಕ ಪಂಜಾಬ್‌ಗೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ರವಾನಿಸಲಾಗುತ್ತಿದೆ. ಪೊಲೀಸ್ ಠಾಣೆಗಳನ್ನೇ ಗುರಿಯಾಗಿಸಿಕೊಂಡು ಗ್ರೆನೇಡ್ ದಾಳಿ ನಡೆಸುವ ಮೂಲಕ ಪಂಜಾಬ್ ಅನ್ನು ‘ಅತಿಸೂಕ್ಷ್ಮ ರಾಜ್ಯ’ ಎಂದು ಬಿಂಬಿಸಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ.

ಪಾಕಿಸ್ತಾನದ ಪ್ರತಿಯೊಂದು ಪಿತೂರಿಯನ್ನು ಪಂಜಾಬ್ ಪೊಲೀಸರು ಮತ್ತು ಭದ್ರತಾ ಸಂಸ್ಥೆಗಳು ಯಶಸ್ವಿಯಾಗಿ ವಿಫಲಗೊಳಿಸುತ್ತಿವೆ. ಸೈನಿಕರ ನೈತಿಕತೆ ಹೆಚ್ಚಿಸಲು ಅಸಿಮ್ ಮುನೀರ್ ಪ್ರಯತ್ನಿಸುತ್ತಿದ್ದರೂ, ಭಾರತದ ಗಡಿಯಲ್ಲಿ ಭದ್ರತಾ ಪಡೆಗಳು ಹದ್ದಿನ ಕಣ್ಣಿಟ್ಟಿವೆ. ಶಾಂತಿ ಕದಡಲು ಯತ್ನಿಸುವ ಪ್ರತಿಯೊಂದು ಡ್ರೋನ್ ಮತ್ತು ಉಗ್ರಗಾಮಿ ಚಟುವಟಿಕೆಗಳನ್ನು ತಟಸ್ಥಗೊಳಿಸಲು ಭಾರತೀಯ ಪಡೆಗಳು ಸಂಪೂರ್ಣ ಸಜ್ಜಾಗಿವೆ ಎಂದು ಡಿಜಿಪಿ ಸ್ಪಷ್ಟಪಡಿಸಿದ್ದಾರೆ.

error: Content is protected !!