Thursday, January 1, 2026

ಅಕ್ರಮ ನಿವಾಸಿಗಳಿಗೆ ‘ಮನೆ’ ಭಾಗ್ಯ: ತುಷ್ಟೀಕರಣದ ರಾಜಕಾರಣಕ್ಕೆ ಕರ್ನಾಟಕ ಬಲಿಯಾಗಬೇಕೇ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೋಗಿಲು ಲೇಔಟ್‌ನಲ್ಲಿ ಅಕ್ರಮವಾಗಿ ನೆಲೆಸಿರುವವರಿಗೆ ಮನೆಗಳನ್ನು ಸಕ್ರಮಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಮಾಜಿ ಸಚಿವ ಹಾಗೂ ಶಾಸಕ ಸುರೇಶ್ ಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಇಡೀ ಪ್ರಕರಣವು ವೋಟ್ ಬ್ಯಾಂಕ್ ರಾಜಕಾರಣದ ಭಾಗವಾಗಿದ್ದು, ಇದರ ಹಿಂದೆ ದೊಡ್ಡ ಸಂಚಿದೆ ಎಂದು ಅವರು ವಿಧಾನಸೌಧದಲ್ಲಿ ಕಿಡಿಕಾರಿದ್ದಾರೆ.

ಕಾಂಗ್ರೆಸ್ ನಾಯಕ ವೇಣುಗೋಪಾಲ್ ಅವರು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿರುವುದರ ಹಿಂದೆ ಕೇರಳ ಚುನಾವಣೆಯ ಹಿತಾಸಕ್ತಿ ಅಡಗಿದೆ ಎಂದು ಸುರೇಶ್ ಕುಮಾರ್ ಗಂಭೀರವಾಗಿ ಆರೋಪಿಸಿದರು. “ಕೇರಳದ ಚುನಾವಣೆಯಲ್ಲಿ ಅನುಕಂಪ ಗಿಟ್ಟಿಸಲು ಅಲ್ಲಿನ ಮುಖ್ಯಮಂತ್ರಿಗಳ ಜೊತೆ ವೇಣುಗೋಪಾಲ್ ಮಾತನಾಡುತ್ತಿದ್ದಾರೆ. ಇದು ಕೇವಲ ‘ಕಾಂಪಿಟೇಟಿವ್ ಪಾಲಿಟಿಕ್ಸ್’. ಕಾಂಗ್ರೆಸ್ ನಾಯಕತ್ವವನ್ನು ಮೆಚ್ಚಿಸಲು ಹೋಗಿ ಕರ್ನಾಟಕದ ಹಿತಾಸಕ್ತಿಯನ್ನು ಬಲಿ ಕೊಡಲಾಗುತ್ತಿದೆ,” ಎಂದು ಅವರು ವಾಗ್ದಾಳಿ ನಡೆಸಿದರು.

“15-20 ವರ್ಷಗಳಿಂದ ಇದ್ದಾರೆ ಎಂಬ ನೆಪವೊಡ್ಡಿ ಯಾವುದೇ ಪರಿಶೀಲನೆ ನಡೆಸದೆ ಅಕ್ರಮ ಮನೆಗಳನ್ನು ಸಕ್ರಮ ಮಾಡುವುದು ನ್ಯಾಯಯುತವಲ್ಲ. ಈ ನೀತಿಯಿಂದಾಗಿ ಕರ್ನಾಟಕದ ನೈಜ ಸಂತ್ರಸ್ತರಿಗೆ ಅನ್ಯಾಯವಾಗುತ್ತಿದೆ. ರಾಜ್ಯದ ಜನತೆಗೆ ಸುಣ್ಣ ಹಚ್ಚಿ, ಕೇರಳದವರಿಗೆ ಬೆಣ್ಣೆ ಹಚ್ಚುವ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ,” ಎಂದು ಅವರು ಮಾರ್ಮಿಕವಾಗಿ ಟೀಕಿಸಿದರು.

“ಬಂದವರಿಗೆಲ್ಲ ಮನೆ ಕೊಡುತ್ತೇವೆ ಎಂದು ಗ್ರೀನ್ ಸಿಗ್ನಲ್ ನೀಡಿದರೆ, ಅತಿಕ್ರಮಣಕಾರರಿಗೆ ಗೇಟ್ ತೆರೆದು ಸ್ವಾಗತ ಕೋರಿದಂತಾಗುತ್ತದೆ. ಈ ಅಕ್ರಮ ನೀತಿಯಿಂದಾಗಿ ಭವಿಷ್ಯದಲ್ಲಿ ರಾಜ್ಯದ ಜನತೆ ಮತ್ತು ಸರ್ಕಾರ ಭಾರಿ ಬೆಲೆ ತೆರಬೇಕಾಗುತ್ತದೆ,” ಎಂದು ಸುರೇಶ್ ಕುಮಾರ್ ಎಚ್ಚರಿಸಿದ್ದಾರೆ.

error: Content is protected !!