ಹೊಸದಿಗಂತ ಬೆಳಗಾವಿ:
ಹೊಸ ವರ್ಷದ ಸಂಭ್ರಮಾಚರಣೆಯ ನಡುವೆಯೇ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಭದ್ರತಾ ಲೋಪದ ಆತಂಕ ಮೂಡಿಸುವ ಘಟನೆಯೊಂದು ನಡೆದಿದೆ. ಗುರುವಾರ ನಸುಕಿನ ಜಾವ ಸುಮಾರು 3 ಗಂಟೆಗೆ ದುಷ್ಕರ್ಮಿಯೊಬ್ಬ ಜೈಲಿನ ಆವರಣದೊಳಗೆ ಡ್ರಗ್ಸ್ ಹಾಗೂ ಮೊಬೈಲ್ ಫೋನ್‌ಗಳನ್ನು ಎಸೆದು ಪರಾರಿಯಾಗಿದ್ದಾನೆ.
ನಸುಕಿನ ಜಾವದ ಕತ್ತಲಲ್ಲಿ ಜೈಲಿನ ಗೋಡೆಯ ಹೊರಭಾಗದಿಂದ ಮಾದಕ ವಸ್ತು ಹಾಗೂ ಮೊಬೈಲ್‌ಗಳಿದ್ದ ಬಂಡಲ್‌ಗಳನ್ನು ಒಳಕ್ಕೆ ಎಸೆಯಲಾಗಿದೆ. ಈ ದೃಶ್ಯವು ಜೈಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಜೈಲಿನ ಭದ್ರತೆಯನ್ನು ಪ್ರಶ್ನಿಸುವಂತೆ ಮಾಡಿದೆ. ಜೈಲಿನಲ್ಲಿರುವ ಕೈದಿಗಳಿಗೆ ಹೊರಗಿನಿಂದ ಈ ರೀತಿ ವ್ಯವಸ್ಥಿತವಾಗಿ ನಿಷೇಧಿತ ವಸ್ತುಗಳನ್ನು ಪೂರೈಸಲಾಗುತ್ತಿದೆ ಎಂಬ ಅನುಮಾನಗಳು ಈಗ ಬಲವಾಗಿವೆ.

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಭೂಷಣ್ ಭೋರಸೆ ಅವರು ಹಿಂಡಲಗಾ ಜೈಲಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೈಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಚರ್ಚಿಸಿ ಮಾಹಿತಿ ಕಲೆಹಾಕಿರುವ ಅವರು, ಘಟನೆ ನಡೆದ ಸ್ಥಳವನ್ನು ಸೂಕ್ಷ್ಮವಾಗಿ ವೀಕ್ಷಿಸಿದ್ದಾರೆ.
ಈ ಘಟನೆಯ ನಂತರ ಎಚ್ಚೆತ್ತುಕೊಂಡಿರುವ ಜೈಲು ಆಡಳಿತ ಮಂಡಳಿ, ಕಾರಾಗೃಹದಾದ್ಯಂತ ಬಿಗಿ ಭದ್ರತೆ ಕೈಗೊಂಡಿದೆ. ಕೈದಿಗಳ ಬ್ಯಾರಕ್ ಹಾಗೂ ಕೊಠಡಿಗಳನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗುತ್ತಿದ್ದು, ಪ್ರಕರಣದ ತನಿಖೆಯನ್ನು ಚುರುಕುಗೊಳಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪರಾರಿಯಾದ ದುಷ್ಕರ್ಮಿಯ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

