Thursday, January 1, 2026

ಒತ್ತುವರಿ ತೆರವು ಆಯ್ತು.. ಈಗ ಅರ್ಜಿಗಳದ್ದೇ ಹಾವಳಿ: ಅಕ್ರಮ ನಿವಾಸಿಗಳ ಪತ್ತೆಗೆ ಅಧಿಕಾರಿಗಳ ಹರಸಾಹಸ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೋಗಿಲು ಲೇಔಟ್‌ನಲ್ಲಿ ತೆರವುಗೊಳಿಸಲಾದ ಮನೆಗಳ ಬದಲಿಗೆ ಸರ್ಕಾರ 167 ಫ್ಲಾಟ್ ನೀಡಲು ಮುಂದಾಗಿತ್ತು. ಆದರೆ, ಈಗ ಸಲ್ಲಿಕೆಯಾಗಿರುವ ಅರ್ಜಿಗಳ ಸಂಖ್ಯೆ ಮತ್ತು ಅರ್ಜಿದಾರರ ಹಿನ್ನೆಲೆ ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಸರ್ಕಾರ ಗುರುತಿಸಿರುವುದು ಕೇವಲ 167 ಕುಟುಂಬಗಳನ್ನು. ಆದರೆ, ವಸತಿಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳ ಸಂಖ್ಯೆ ಇದನ್ನು ಮೀರಿ ನಿಂತಿದೆ. ಡೆಮಾಲಿಷ್ ಆದ ಒಂದೇ ಮನೆಯ ವಿಳಾಸವನ್ನು ನೀಡಿ ಇಬ್ಬರು ಅಥವಾ ಮೂವರು ಅರ್ಜಿ ಸಲ್ಲಿಸಿರುವುದು ಪತ್ತೆಯಾಗಿದೆ.

ಸ್ಥಳೀಯ ನಿವಾಸಿಗಳಲ್ಲದವರೂ ಸಹ ಈ ಯೋಜನೆಯಡಿ ಮನೆ ಪಡೆಯಲು ಅರ್ಜಿ ಸಲ್ಲಿಸಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಪ್ರಸ್ತುತ ವಸತಿ ಇಲಾಖೆಯ ಅಧಿಕಾರಿಗಳು ಅರ್ಜಿಗಳ ನೈಜತೆ ಪರಿಶೀಲಿಸುತ್ತಿದ್ದು, ‘ಕನ್ನಡಿಗರು’ ಮತ್ತು ‘ಪರಭಾಷಿಕರು’ ಎಂದು ಎರಡು ಪ್ರತ್ಯೇಕ ಪಟ್ಟಿಗಳನ್ನು ಸಿದ್ಧಪಡಿಸುತ್ತಿದ್ದಾರೆ.

ಅಕ್ರಮ ಒತ್ತುವರಿದಾರರಿಗೆ ಮನೆ ನೀಡುವ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ಮತ್ತು ಜೆಡಿಎಸ್ ತೀವ್ರ ವಿರೋಧ ವ್ಯಕ್ತಪಡಿಸಿವೆ. “ದಶಕಗಳಿಂದ ಸಂಕಷ್ಟದಲ್ಲಿರುವ ಅರ್ಹ ಕನ್ನಡಿಗ ಫಲಾನುಭವಿಗಳಿಗೆ ಮನೆ ನೀಡುವುದನ್ನು ಬಿಟ್ಟು, ಅಕ್ರಮವಾಗಿ ನೆಲೆಸಿದ ವಲಸಿಗರಿಗೆ ಮಣೆ ಹಾಕುತ್ತಿರುವುದು ಸರಿಯಲ್ಲ” ಎಂದು ಪ್ರತಿಪಕ್ಷಗಳು ಕಿಡಿಕಾರಿವೆ.

error: Content is protected !!