Thursday, January 1, 2026

ಸರ್ಕಾರದ ಸೇವೆಗಳನ್ನು ವಿಳಂಬ ಮಾಡದೇ ಪೂರೈಸಿ: ಅಧಿಕಾರಿಗಳಿಗೆ ಸಿಎಂ ಕರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದ ಜನತೆಗೆ ಸರ್ಕಾರದ ಸೇವೆಗಳನ್ನು ವಿಳಂಬ ಮಾಡದೇ ಪೂರೈಸುವ ಜೊತೆಗೆ, ಅಧಿಕಾರಿಗಳು ಜಾತ್ಯತೀತವಾಗಿ, ಮಾನವೀಯ ನೆಲೆಯಲ್ಲಿ ಸಾರ್ವಜನಿಕರಿಗೆ ಸ್ಪಂದಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ತಿಳಿಸಿದರು.

ಇಂದು ಹೊಸ ವರ್ಷದ ಪ್ರಯುಕ್ತ ಸರ್ಕಾರದ ಎಲ್ಲಾ ಹಿರಿಯ ಅಧಿಕಾರಿಗಳಿಗೆ ಶುಭಕೋರಿದ ನಂತರ ಸಭೆಯನ್ನುದ್ದೇಶಿಸಿ ಸಿಎಂ ಮಾತನಾಡಿದರು. ಹೊಸ ವರ್ಷದ ಮೊದಲ ದಿನವಾದ ಇಂದು ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವುದು ನಮ್ಮ ಪದ್ಧತಿ. ಹಿಂದೂ ಪದ್ಧತಿಯಲ್ಲಿ ಯುಗಾದಿ ಹೊಸ ವರ್ಷವಾಗಿದ್ದರೂ, ಇಂಗ್ಲಿಷ್ ಕ್ಯಾಲೆಂಡರ್​ನಂತೆ ಇಂದು ಪ್ರಾರಂಭವಾಗುವ ಹೊಸ ವರ್ಷವನ್ನು ವಿಶ್ವದಾದ್ಯಂತ ಸಂಭ್ರಮಾಚರಣೆಯಿಂದ ಸ್ವಾಗತಿಸಲಾಗುತ್ತದೆ. 2026ರ ವರ್ಷ ರಾಜ್ಯಕ್ಕೆ ಸಮೃದ್ಧಿಯನ್ನು ತರಲಿ ಹಾಗೂ ರಾಜ್ಯ ಜನತೆ ಸುಖ ಸಮೃದ್ಧಿ ಶಾಂತಿಯಿರಲಿ, ಬಡವರ ಹಾಗೂ ರೈತರ ಮೊಗದಲ್ಲಿ ಸಂತೋಷ ಕಾಣಲೆಂದು ಮುಖ್ಯಮಂತ್ರಿಗಳು ಶುಭ ಹಾರೈಸಿದರು.

ಉತ್ತಮ ಮಳೆ ಬೆಳೆಯಿಂದ ಹೆಚ್ಚಿನ ಸಮಸ್ಯೆ ಪರಿಹಾರವಾಗುತ್ತದೆ. 2025ರಲ್ಲಿ ಉತ್ತಮ ಮಳೆಯಾದ ಜೊತೆಗೆ ಬೆಳೆಹಾನಿಯೂ ಸಂಭವಿಸಿತು. 12 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿ, ಹಾನಿಗೊಳಗಾದ ರೈತರಿಗೆ ಪರಿಹಾರ ಒದಗಿಸುವುದು ಸರ್ಕಾರದ ಕರ್ತವ್ಯ. ಕೇಂದ್ರ ಸರ್ಕಾರ ಎನ್​ಡಿಆರ್​ಎಫ್​ನಿಂದ ಹಾಗೂ ರಾಜ್ಯ ಸರ್ಕಾರ ಎಸ್​ಡಿಆರ್​ಎಫ್​ನಿಂದ ಪರಿಹಾರವನ್ನು ನೀಡುತ್ತದೆ. ರೈತರಿಗೆ ಹೆಚ್ಚಿನ ಪರಿಹಾರಗಳನ್ನು ಒದಗಿಸುವ ಮೂಲಕ ಅವರ ಕಷ್ಟಗಳಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ. ರೈತರ ಹಾಗೂ ಜನರ ಸಂಕಷ್ಟಗಳಿಗೆ ಸ್ಪಂದಿಸುವಲ್ಲಿ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿರುತ್ತದೆ. 2025ರಲ್ಲಿ ಖುಷ್ಕಿ, ನೀರಾವರಿ ಸೇರಿದಂತೆ ಬೆಳೆಗೆ ಪ್ರತಿ ಹೆಕ್ಟೇರ್​ಗೆ 8,500 ರೂ. ಪರಿಹಾರ ನೀಡಲಾಗಿದ್ದು, ರೈತರಿಗೆ ತುಸು ನೆಮ್ಮದಿ ಕಾಣುವಂತಾಗಿದೆ ಎಂದರು.

error: Content is protected !!