ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಿತ್ರರಂಗದ ಯಶಸ್ವಿ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮೊಂತೆರೋ ದಾಂಪತ್ಯ ಜೀವನದ ಮತ್ತೊಂದು ಮಹತ್ವದ ಘಟ್ಟಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ನಂತರ ಈ ಜೋಡಿ ಬೆಂಗಳೂರಿನಲ್ಲಿ ತಮಗಾಗಿ ಒಂದು ಸುಂದರವಾದ ಮನೆಯನ್ನು ಖರೀದಿಸಿದ್ದು, ಅತ್ಯಂತ ಅದ್ಧೂರಿಯಾಗಿ ಗೃಹಪ್ರವೇಶ ನೆರವೇರಿಸಿದ್ದಾರೆ.

ಈ ಮನೆಯಲ್ಲಿ ಎಲ್ಲರ ವಿಶೇಷ ಗಮನ ಸೆಳೆಯುತ್ತಿರುವುದು ತರುಣ್ ಸುಧೀರ್ ಅವರ ತಂದೆ, ಹಿರಿಯ ನಟ ದಿ. ಸುಧೀರ್ ಅವರ ಬೃಹತ್ ಭಾವಚಿತ್ರ. ತಂದೆಯ ಬಗ್ಗೆ ಅಪಾರ ಗೌರವ ಹಾಗೂ ಪ್ರೀತಿ ಹೊಂದಿರುವ ತರುಣ್, ಮನೆಯ ಪ್ರಮುಖ ಭಾಗದಲ್ಲೇ ಅವರ ಫೋಟೋ ಅಳವಡಿಸಿ ಪೂಜೆ ಸಲ್ಲಿಸಿದ್ದಾರೆ. ತಂದೆ ದೈಹಿಕವಾಗಿ ದೂರವಿದ್ದರೂ, ಅವರ ಆಶೀರ್ವಾದ ಸದಾ ತಮ್ಮ ಮೇಲಿರುತ್ತದೆ ಎಂಬುದು ತರುಣ್ ಅವರ ಈ ನಡೆಯಿಂದ ಮತ್ತೊಮ್ಮೆ ಸಾಬೀತಾಗಿದೆ.

ಹಿಂದೂ ಧರ್ಮದ ಸಂಪ್ರದಾಯಗಳನ್ನು ಮನಸಾರೆ ಮೆಚ್ಚಿಕೊಂಡಿರುವ ಸೋನಲ್, ಗೃಹಪ್ರವೇಶದ ವೇಳೆ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದರು. ಅತ್ಯಂತ ಭಕ್ತಿಯಿಂದ ಹಾಲು ಉಕ್ಕಿಸುವ ಶಾಸ್ತ್ರವನ್ನು ನೆರವೇರಿಸಿ ಹೊಸ ಮನೆಗೆ ಅದೃಷ್ಟ ತಂದಿದ್ದಾರೆ. ಈ ಸುಂದರ ಕ್ಷಣಗಳ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಈ ಜೋಡಿಯ ಸುಖಿ ಜೀವನಕ್ಕೆ ಹರಸುತ್ತಿದ್ದಾರೆ.


