ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ಎಡಗೈ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್‌ಗೆ ಹೊಸ ವರ್ಷ ಹೊಸ ಅವಕಾಶದ ಸೂಚನೆ ನೀಡಿದೆ. ಎಲ್ಲವೂ ಅನುಕೂಲಕರವಾಗಿ ನಡೆದರೆ, ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯೊಂದಿಗೆ ಪಡಿಕ್ಕಲ್ ಟೀಮ್ ಇಂಡಿಯಾದಲ್ಲಿ ODI ಫಾರ್ಮೆಟ್‌ಗೆ ಪದಾರ್ಪಣೆ ಮಾಡುವ ಸಾಧ್ಯತೆ ಕಂಡುಬಂದಿದೆ. ಹೊಸ ವರ್ಷದ ಮೊದಲ ಸರಣಿಗೆ ಭಾರತ ತಂಡದ ಆಯ್ಕೆ ಪ್ರಕ್ರಿಯೆ ಆರಂಭವಾಗಿದ್ದು, ಶೀಘ್ರದಲ್ಲೇ ತಂಡ ಘೋಷಣೆಯಾಗಲಿದೆ.
ಈ ನಡುವೆ ಶ್ರೇಯಸ್ ಅಯ್ಯರ್‌ಗೆ ಹಿನ್ನಡೆ ಎದುರಾಗಿದೆ. ಆಸ್ಟ್ರೇಲಿಯಾ ಪ್ರವಾಸದ ವೇಳೆ ಗಾಯಗೊಂಡಿದ್ದ ಅಯ್ಯರ್, ಬೆಂಗಳೂರಿನ ಎನ್‌ಸಿಎನಲ್ಲಿ ನಡೆದ ಫಿಟ್‌ನೆಸ್ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ. ಸಂಪೂರ್ಣ ಫಿಟ್ ಅಲ್ಲ ಎಂಬ ವರದಿ ಹೊರಬಿದ್ದಿರುವುದರಿಂದ ನ್ಯೂಜಿಲೆಂಡ್ ಸರಣಿಗೆ ಅವರು ಹೊರಗುಳಿಯುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ಆಯ್ಕೆ ಸಮಿತಿಯ ಗಮನ ಪಡಿಕ್ಕಲ್ ಕಡೆ ತಿರುಗಿದೆ.
ವಿಜಯ್ ಹಜಾರೆ ಟ್ರೋಫಿಯಲ್ಲಿ ಪಡಿಕ್ಕಲ್ ಭರ್ಜರಿ ಪ್ರದರ್ಶನ ನೀಡಿದ್ದು, ನಾಲ್ಕು ಪಂದ್ಯಗಳಲ್ಲಿ ಮೂರು ಶತಕ ಸಿಡಿಸಿ ರನ್‌ಗಳ ಮಳೆ ಸುರಿಸಿದ್ದಾರೆ. ಲಿಸ್ಟ್ ‘ಎ’ ಕ್ರಿಕೆಟ್‌ನಲ್ಲಿ 37 ಪಂದ್ಯಗಳಲ್ಲಿ 12 ಶತಕ ಮತ್ತು 12 ಅರ್ಧಶತಕಗಳೊಂದಿಗೆ 84ರ ಸರಾಸರಿ ಹೊಂದಿರುವ ಪಡಿಕ್ಕಲ್, ವೈಟ್ ಬಾಲ್ ಕ್ರಿಕೆಟ್‌ಗೆ ತಕ್ಕ ಬ್ಯಾಟರ್ ಎಂದು ಸಾಬೀತುಪಡಿಸಿದ್ದಾರೆ.
ಟಾಪ್ ಆರ್ಡರ್ ಹಾಗೂ ಮಿಡಲ್ ಆರ್ಡರ್ ಎರಡೂ ಸ್ಥಾನಗಳಲ್ಲಿ ಆಡಬಲ್ಲ ಸಾಮರ್ಥ್ಯ ಹೊಂದಿರುವ ಪಡಿಕ್ಕಲ್, ಈಗ ODI ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ನ್ಯೂಜಿಲೆಂಡ್ ಸರಣಿಯಲ್ಲಿ ಆಯ್ಕೆ ಸಿಕ್ಕರೆ, ಇದು ಕನ್ನಡಿಗನ ಕ್ರಿಕೆಟ್ ಬದುಕಿನ ಹೊಸ ಅಧ್ಯಾಯವಾಗಲಿದೆ.

