ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಈಗಾಗಲೇ ಸಿನಿರಸಿಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ನಯನತಾರಾ, ಕಿಯಾರಾ ಅಡ್ವಾಣಿ ಮತ್ತು ಹುಮಾ ಖುರೇಷಿ ಅವರ ಫಸ್ಟ್ ಲುಕ್ ಪೋಸ್ಟರ್‌ಗಳು ಬಿಡುಗಡೆಯಾದ ಬಳಿಕ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.
ಇದೇ ವೇಳೆ ಇದೀಗ ಟಾಕ್ಸಿಕ್ ಚಿತ್ರದ ಸೆಟ್‌ನ ತೆರೆಮರೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ಗಮನ ಸೆಳೆದಿದೆ.
ರೆಡಿಟ್‌ನ BollyBlindsNGossip ಪುಟದಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ, ಗಂಗಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಯನತಾರಾ ಒಬ್ಬ ಅತಿಥಿಯನ್ನು ಹ್ಯಾಂಡ್‌ಶೇಕ್ ಮೂಲಕ ಸ್ವಾಗತಿಸುವ ದೃಶ್ಯವಿದೆ. ಬಳಿಕ ಯಶ್ ಕೂಡ ಅದೇ ರೀತಿಯಲ್ಲಿ ಆತಿಥ್ಯ ನೀಡುತ್ತಾರೆ. ಕಪ್ಪು ಗೌನ್‌ನಲ್ಲಿ ನಯನತಾರಾ ಎಲಿಗಂಟ್ ಲುಕ್‌ನಲ್ಲಿ ಮಿಂಚಿದರೆ, ಬಿಳಿ ಉಡುಪಿನಲ್ಲಿ ಯಶ್ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿಕ್ಕ ಕ್ಲಿಪ್ ಕೂಡ ಚಿತ್ರದ ಗ್ಲಾಮರ್ ಮತ್ತು ಕ್ಲಾಸ್‌ನ್ನು ತೋರಿಸುತ್ತಿದೆ ಎನ್ನಲಾಗುತ್ತಿದೆ.
ಕೆಜಿಎಫ್ ಬಳಿಕ ಯಶ್ ನಟನೆಯ ಚಿತ್ರವಾಗಿರುವ ಕಾರಣ ‘ಟಾಕ್ಸಿಕ್’ ಮೇಲಿನ ನಿರೀಕ್ಷೆ ಉತ್ತುಂಗದಲ್ಲಿದೆ. ಚಿತ್ರತಂಡ ಒಂದೊಂದೇ ಕಾಸ್ಟಿಂಗ್ ವಿವರಗಳನ್ನು ಬಹಿರಂಗಪಡಿಸುತ್ತಿದ್ದು, ಪ್ರತಿಯೊಂದು ಅಪ್ಡೇಟ್ ಕೂಡ ವೈರಲ್ ಆಗುತ್ತಿದೆ.

