Friday, January 2, 2026

2026ರ CET ವೇಳಾಪಟ್ಟಿ ಪ್ರಕಟ: ಏಪ್ರಿಲ್ 23ಕ್ಕೆ ಪ್ರವೇಶ ಪರೀಕ್ಷೆ ಸ್ಟಾರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

2026ನೇ ಸಾಲಿನ ಕಾಮನ್ ಎಂಟ್ರನ್ಸ್ ಟೆಸ್ಟ್‌ (CET) ದಿನಾಂಕಗಳನ್ನು ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ. ಏಪ್ರಿಲ್ ತಿಂಗಳಲ್ಲಿ ಎರಡು ದಿನಗಳ ಕಾಲ CET ಪರೀಕ್ಷೆ ನಡೆಯಲಿದ್ದು, ಏಪ್ರಿಲ್ 23ರಂದು ಭೌತಶಾಸ್ತ್ರ ಹಾಗೂ ರಸಾಯನಶಾಸ್ತ್ರ ಪರೀಕ್ಷೆ, ಏಪ್ರಿಲ್ 24ರಂದು ಗಣಿತ ಮತ್ತು ಜೀವಶಾಸ್ತ್ರ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಪ್ರತಿಯೊಂದು ವಿಷಯಕ್ಕೂ 60 ಅಂಕಗಳನ್ನು ನಿಗದಿಪಡಿಸಲಾಗಿದೆ.

CET ಪ್ರವೇಶಾತಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಜನವರಿ 17ರಿಂದ ಆರಂಭವಾಗಲಿದೆ. ಉನ್ನತ ಶಿಕ್ಷಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಎಂ.ಸಿ. ಸುಧಾಕರ್ ಮತ್ತು ಡಾ. ಶರಣ ಪ್ರಕಾಶ ಪಾಟೀಲ್ ಅವರು CET ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ಈ ಮಾರ್ಗಸೂಚಿ ವಿದ್ಯಾರ್ಥಿಗಳಿಗೆ ಅರ್ಜಿ ಪ್ರಕ್ರಿಯೆ ಮತ್ತು ಪ್ರವೇಶಾತಿ ಕುರಿತ ಗೊಂದಲ ನಿವಾರಣೆಗೆ ಸಹಕಾರಿಯಾಗಲಿದೆ ಎಂದು ಸಚಿವರು ಹೇಳಿದ್ದಾರೆ.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸ್ಪಷ್ಟ ಮಾಹಿತಿ ಒದಗಿಸುವ ಉದ್ದೇಶದಿಂದ 3.75 ಲಕ್ಷ ದಿಕ್ಸೂಚಿ ಪ್ರತಿಗಳನ್ನು ಮುದ್ರಿಸಿ ವಿತರಿಸಲಾಗುವುದು. ಹೊರನಾಡು ಮತ್ತು ಗಡಿನಾಡು ಕನ್ನಡಿಗ ವಿದ್ಯಾರ್ಥಿಗಳಿಗೆ ಏಪ್ರಿಲ್ 22ರಂದು ಕನ್ನಡ ಭಾಷಾ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಲಾಗಿದೆ.

ಇದೇ ವೇಳೆ ಇತರ ಪ್ರವೇಶ ಪರೀಕ್ಷೆಗಳ ವೇಳಾಪಟ್ಟಿಯನ್ನೂ ಪ್ರಕಟಿಸಲಾಗಿದೆ. KRIES ಆರನೇ ತರಗತಿ ಪ್ರವೇಶ ಪರೀಕ್ಷೆ ಮಾರ್ಚ್ 1ರಂದು, MBA ಮತ್ತು MCAಗೆ PGCET ಮೇ 14ರಂದು, M.E/M.Tech ಮತ್ತು ಲ್ಯಾಟರಲ್ ಎಂಟ್ರಿ DCET ಮೇ 23ರಂದು ನಡೆಯಲಿದೆ. MSc ನರ್ಸಿಂಗ್, MPT, MSc AHS ಪರೀಕ್ಷೆಗಳು ಜುಲೈ 18ರಂದು, KSET ಅಕ್ಟೋಬರ್ 11ರಂದು ಹಾಗೂ M-Pharma ಮತ್ತು M-Pharma D ಪರೀಕ್ಷೆಗಳು ನವೆಂಬರ್ 21ರಂದು ನಡೆಯಲಿವೆ.

error: Content is protected !!