Friday, January 2, 2026

ಒಂದೇ ದಿನ ನಡೆಯಲಿದೆ ಎರಡು ವಿಸ್ಮಯ, ಸೂರ್ಯ-ಚಂದ್ರರ ಅಪರೂಪದ ಮೀಟಿಂಗ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಾಳೆ ಸೂರ್ಯ ಸುಮಾರು 30 ಲಕ್ಷ ಕಿ.ಮೀ ಭೂಮಿಗೆ ಸಮೀಪ ಬಂದು ದೊಡ್ಡದಾಗಿ ಕಾಣುತ್ತಾನೆ. ಚಂದ್ರನೂ ಕೂಡ ಸುಮಾರು 27 ಸಾವಿರ ಕಿ.ಮೀ ಸಮೀಪಿಸಿ ದೊಡ್ಡದಾಗಿಯೇ ಕಾಣುತ್ತಾನೆ. ಈ ವಿಸ್ಮಯ ನಡೆಯುವುದು ಒಂದೇ ದಿನ, ಅದೇ ವಿಶೇಷ.

ಚಂದ್ರ ಭೂಮಿಯಿಂದ ಸಾಮಾನ್ಯಕ್ಕಿಂತ ಕಡಿಮೆ ದೂರ ತಲುಪಿದಾಗ ಅದರ ಗಾತ್ರ ಮತ್ತು ಹೊಳಪು ಹೆಚ್ಚಾಗುತ್ತದೆ. ಅಂತಹ ಚಂದ್ರನನ್ನು ಸೂಪರ್‌ಮೂನ್ ಎನ್ನುವರು. ಜ.3ರಂದು ಹುಣ್ಣಿಮೆ ಹಾಗೂ ಸೂಪರ್ ಮೂನ್ ಕೂಡಾ ಘಟಿಸಲಿದೆ. ಇದು ಈ ವರ್ಷದ ಮೊದಲ ಸೂಪರ್​ ಮೂನ್​. ಸೂಪರ್​ ಮೂನ್​ನಿಂದಾಗಿ ಹುಣ್ಣಿಮೆಯ ಚಂದ್ರ ಭೂಮಿಗೆ ಸುಮಾರು 27,000 ಕಿ.ಮೀ ಸಮೀಪ ಬಂದು 14 ಅಂಶ ದೊಡ್ಡದಾಗಿ, ಸುಮಾರು 30 ಅಂಶ ಹೆಚ್ಚಿನ ಹುಣ್ಣಿಮೆಯ ಬೆಳಕಿನಿಂದ ಬೆಳಗಲಿದ್ದಾನೆ.

ಹಾಗೆಯೇ, ಸೂರ್ಯನಲ್ಲೂ ವಿಶೇಷ ದಿನ. ಸೂರ್ಯನ ಸುತ್ತ ತಿರುಗುವ ಭೂಮಿಯ ದೀರ್ಘ ವೃತ್ತದ ಕಾರಣದಿಂದ ಜ.3ರಂದು ಸಮೀಪ ದೂರ (ಪೆರಿಜಿಗೆ) ಭೂಮಿ ಬಂದು, ಸರಾಸರಿ ದೂರ 15 ಕೋಟಿ ಕಿ.ಮೀಕ್ಕಿಂತ 14 ಕೋಟಿ 70 ಲಕ್ಷ ಕಿ.ಮೀಗೆ ಬರಲಿದೆ. ಇದರಿಂದ ಸೂರ್ಯ ಮಾಮೂಲಿಗಿಂತ ಭೂಮಿಯ ಸಮೀಪ ಬರಲಿದೆ. ಹಾಗಾಗಿ ಸೂರ್ಯ ಉಳಿದ ದಿನಕ್ಕಿಂತ ಈ ದಿನ ದೊಡ್ಡದಾಗಿ ಕಾಣುತ್ತದೆ.

ಈ ವರ್ಷ ಭೂಮಿ ಜ.3ರಂದು ಪೆರಿಜಿಗೆ ಹಾಗೂ ಜುಲೈ 6ರಂದು ಅಪೊಜಿಗೆ ಬರಲಿದೆ. ಸೂರ್ಯನ ಸುತ್ತ ತಿರುಗುವ ಭೂಮಿ ಹಾಗೂ ಭೂಮಿಯ ಸುತ್ತ ತಿರುಗುವ ಚಂದ್ರ ಪಥ ವರ್ತುಲವಲ್ಲದೇ ದೀರ್ಘ ವೃತ್ತಾಕಾರವಾಗಿರುವುದೇ ಈ ಎಲ್ಲ ಸುಂದರ ಖಗೋಳ ವಿದ್ಯಾಮಾನಗಳಿಗೆ ಕಾರಣ. ಅದರಲ್ಲೂ ಈ ವರ್ಷ ಜ.3ರಂದು ಹುಣ್ಣಿಮೆ ಬಂದು ಸೂಪರ್ ಮೂನ್ ಆಗಿರುವುದು ವಿಶೇಷವಾಗಿದೆ.

error: Content is protected !!