Friday, January 2, 2026

ಮೊದಲು ನಿಮ್ಮ ಶಾಸಕನನ್ನು ಒದ್ದು ಒಳಗೆ ಹಾಕಿ: ಸರಕಾರಕ್ಕೆ ಬಿ.ವೈ. ವಿಜಯೇಂದ್ರ ಆಗ್ರಹ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಾಜಿ ಸಚಿವ ಮತ್ತು ಶಾಸಕ ಜಿ. ಜನಾರ್ಧನ ರೆಡ್ಡಿ ಅವರ ಬಳ್ಳಾರಿಯ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಭೇಟಿ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ದ್ವೇಷ ಭಾಷಣ ಮಸೂದೆಯಡಿ ಮೊದಲ ಅಪರಾಧಿ ನಿಮ್ಮ ಶಾಸಕ ನಾರಾ ಭರತ್ ರೆಡ್ಡಿ. ಅವರ ಮಾತುಗಳು ಪ್ರಚೋದನೆಯಲ್ಲದೇ ಮತ್ತೇನು ಎಂದು ಪ್ರಶ್ನಿಸಿದ್ದಾರೆ.

ಜನಾರ್ದನ ರೆಡ್ಡಿ ಅವರ ಮನೆ ನುಚ್ಚು ನೂರು ಮಾಡುತ್ತೇನೆ; ಪುಡಿಪುಡಿ ಮಾಡುತ್ತೇನೆ. ಭಸ್ಮ ಮಾಡುತ್ತೇನೆ; ಮುಗಿಸಿಬಿಡುವೆ ಎಂಬ ಧಾಟಿಯಲ್ಲಿ ಕೈ ಶಾಸಕ ಮಾತನಾಡಿದ್ದಾರೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಸರ್ಕಾರಕ್ಕೆ ನಾಡಿನ ನೆಲದ ಕಾನೂನಿನ ಬಗ್ಗೆ ಗೌರವ ಇದ್ದರೆ, ಮೊದಲು ನಿಮ್ಮ ಶಾಸಕನನ್ನು ಒದ್ದು ಒಳಗೆ ಹಾಕಿ ಎಂದು ಆಗ್ರಹಿಸಿದರು.

ಈ ರೀತಿ ಗೂಂಡಾಗಿರಿ ನಡೆಯುವುದಿಲ್ಲ ಎಂದು ಅವರಿಗೂ ಅರ್ಥ ಆಗಬೇಕು. ಮಹರ್ಷಿ ವಾಲ್ಮೀಕಿಯವರಿಗೆ ಯಾವ ರೀತಿ ಗೌರವ ಕೊಡಬೇಕೆಂಬ ಸೌಜನ್ಯ ಇವರಿಗೆ ಇಲ್ಲ. ಒಳ್ಳೆಯ ವಾತಾವರಣ ಹಾಳು ಮಾಡುವ ದುಸ್ಸಾಹಸಕ್ಕೆ ಕೈ ಹಾಕಿದ್ದು ಇದನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ ಎಂದು ತಿಳಿಸಿದರು.

ಶ್ರೀರಾಮುಲು, ಆನಂದ್ ಸಿಂಗ್, ಸೋಮಶೇಖರ ರೆಡ್ಡಿ ಅವರು 25 ವರ್ಷಗಳ ಹಿಂದೆ ಇದೇ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿಯವರ ಪ್ರತಿಮೆ ಇಟ್ಟು ಗೌರವ ಕೊಡುವ ಕೆಲಸ ಮಾಡಿದ್ದಾರೆ. ಇದೀಗ ರಾಜಕೀಯ ತೆವಲಿಗೆ ಈ ರೀತಿ ಗೂಂಡಾಗರ್ದಿ ಮಾಡಿಕೊಂಡು ಬ್ಯಾನರ್, ಪೋಸ್ಟರನ್ನು ಅನುಮತಿ ಇಲ್ಲದೇ ಹಾಕಿಕೊಂಡು ನಮ್ಮ ಕಾರ್ಯಕರ್ತರ ಮೇಲೆ ಗೂಂಡಾಗರ್ದಿ ಮಾಡಿದ್ದು, ಗುಂಡು ಹಾರಿಸಿದ್ದು ಜನಾರ್ದನ ರೆಡ್ಡಿಯವರ ಮನೆ ಮೇಲೆ ನಿಂತಿದ್ದವರ ಮೇಲೆ ರಾಜಕೀಯ ವ್ಯಕ್ತಿಗಳು ಗನ್‍ಮನ್‍ಗಳ ಮೂಲಕ ಗುಂಡು ಹಾರಿಸಿದ್ದು ಅಕ್ಷಮ್ಯ ಅಪರಾಧ ಎಂದು ಆರೋಪಿಸಿದರು.

ಕಾಂಗ್ರೆಸ್ ಪಕ್ಷದ ಖಾಸಗಿ ಗನ್‍ಮನ್‍ಗಳ ಗುಂಡಿನಿಂದಲೇ ಅವರು ಪ್ರಾಣ ಕಳಕೊಂಡಿದ್ದಾರೆ ಎಂದು ಅವರು ಆರೋಪಿಸಿದರು. ಇದಕ್ಕೆ ಆಡಳಿತ ಪಕ್ಷದ ಶಾಸಕ ಭರತ್ ರೆಡ್ಡಿಯವರೇ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.

ಈ ಗೂಂಡಾಗರ್ದಿ ಮೂಲಕ ಜನಾರ್ಧನ ರೆಡ್ಡಿ, ಶ್ರೀರಾಮುಲು, ಆನಂದ್ ಸಿಂಗ್, ಸೋಮಶೇಖರ ರೆಡ್ಡಿ, ನಮ್ಮ ಪಕ್ಷದ ಕಾರ್ಯಕರ್ತರನ್ನು ಬೆದರಿಸಬಹುದು; ಹೆದರಿಸಬಹುದೆಂಬ ಭ್ರಮೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕ ಅಥವಾ ಗೂಂಡಾ ಶಾಸಕ ವರ್ತನೆ ಮಾಡಿದ್ದಾರೆ. ಇದರಿಂದ ನಮ್ಮ ಕಾರ್ಯಕರ್ತರು ಧೃತಿಗೆಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ ಅವರು, ನಿನ್ನೆಯ ಗೂಂಡಾಗರ್ದಿಯಲ್ಲಿ ಏಟು ತಿಂದು ಬಳ್ಳಾರಿಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಯಕರ್ತರನ್ನೂ ಮಾತನಾಡಿಸಿ ಬಂದಿರುವುದಾಗಿ ಹೇಳಿದರು.

error: Content is protected !!