ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸ ವರ್ಷದ ಸಂಭ್ರಮಾಚರಣೆಗೆ ಮುನ್ನ ಅಮೆರಿಕದಲ್ಲಿ ಸಂಭವಿಸಬಹುದಾಗಿದ್ದ ಭಯೋತ್ಪಾದಕ ದಾಳಿಯನ್ನು ಎಫ್‌ಬಿಐ ಯಶಸ್ವಿಯಾಗಿ ತಡೆದಿದೆ. ಉತ್ತರ ಕೆರೊಲಿನಾದಲ್ಲಿ ಐಸಿಸ್ ಪ್ರೇರಣೆಯಿಂದ ದಾಳಿ ನಡೆಸಲು ಯೋಜಿಸಿದ್ದ ಅಪ್ರಾಪ್ತ ಯುವಕನನ್ನು ಬಂಧಿಸಲಾಗಿದೆ ಎಂದು ಫೆಡರಲ್ ತನಿಖಾ ಸಂಸ್ಥೆ(FBI) ಮಾಹಿತಿ ನೀಡಿದೆ.
ಬಂಧಿತ ಆರೋಪಿ ಕೇವಲ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವನಾಗಿದ್ದು, ಹೊಸ ವರ್ಷದ ಮುನ್ನಾದಿನವೇ ದಾಳಿ ನಡೆಸುವ ಉದ್ದೇಶ ಹೊಂದಿದ್ದನು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಈ ಯುವಕ ವಿದೇಶದಲ್ಲಿರುವ ಐಸಿಸ್ ಸಂಘಟನೆಯ ಸದಸ್ಯರೊಂದಿಗೆ ಸಂಪರ್ಕ ಹೊಂದಿದ್ದನೆಂದು ಎಫ್‌ಬಿಐ ತಿಳಿಸಿದೆ. ಅಲ್ಲಿಂದ ದಾಳಿ ನಡೆಸುವ ವಿಧಾನಗಳ ಕುರಿತು ಸಲಹೆಗಳನ್ನು ಪಡೆದಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.
ಎಫ್‌ಬಿಐ ಪ್ರಕಾರ, ಆರೋಪಿ ಚಾಕುಗಳು ಹಾಗೂ ಸುತ್ತಿಗೆಗಳನ್ನು ಬಳಸಿ ಜನರ ಮೇಲೆ ದಾಳಿ ನಡೆಸಲು ಯೋಜಿಸಿದ್ದ. ಕಳೆದ ಒಂದು ವರ್ಷದಿಂದಲೇ ಆತ ಈ ಸಂಚು ರೂಪಿಸುತ್ತಿದ್ದು, ಅಮಾಯಕರನ್ನು ಕೊಂದು ಜಿಹಾದ್ ಸಾಧಿಸುವ ಉದ್ದೇಶ ಹೊಂದಿದ್ದನು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

