ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ಷುಲ್ಲಕ ಕಾರಣಗಳಿಗಾಗಿ ಅಥವಾ ಜೀವನದ ಜಿಗುಪ್ಸೆಯಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ. ಇದಕ್ಕೆ ಸಾಕ್ಷಿಯೆಂಬಂತೆ ತೆಲಂಗಾಣದಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು, ತನ್ನಿಬ್ಬರು ಪುಟ್ಟ ಮಕ್ಕಳನ್ನು ಅನಾಥವಾಗಿಸಿ ಮಹಿಳೆಯೊಬ್ಬರು ಕೆರೆಗೆ ಹಾರಿ ಪ್ರಾಣ ಬಿಟ್ಟಿದ್ದಾರೆ.
ಮೃತ ಮಹಿಳೆಯನ್ನು 29 ವರ್ಷದ ವಸಂತಾ ಎಂದು ಗುರುತಿಸಲಾಗಿದೆ. ಇವರಿಗೆ ಏಳು ವರ್ಷ ಹಾಗೂ ಮೂರೂವರೆ ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಪತಿ ಲಕ್ಷ್ಮಣ್ ಅವರನ್ನು ಕಳೆದುಕೊಂಡಿದ್ದ ವಸಂತಾ, ಅಂದಿನಿಂದ ತಾಯಿ ಮತ್ತು ಸಹೋದರನ ಜೊತೆ ವಾಸವಿದ್ದರು. ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತಾ ತಮ್ಮ ಕುಟುಂಬವನ್ನು ಸಲಹುತ್ತಿದ್ದರು.
ಶುಕ್ರವಾರ ಸಂಜೆ ಹೈದರಾಬಾದ್‌ನ ಪ್ರಸಿದ್ಧ ಪ್ರವಾಸಿ ತಾಣ ಟ್ಯಾಂಕ್ ಬಂಡ್‌ಗೆ ಮಕ್ಕಳನ್ನು ಕರೆತಂದ ವಸಂತಾ, ಅವರು ಆಟವಾಡಲು ಮೊಬೈಲ್ ಫೋನ್ ನೀಡಿದ್ದಾರೆ. ಮಕ್ಕಳು ಮೊಬೈಲ್‌ನಲ್ಲಿ ಮಗ್ನರಾಗಿದ್ದ ಸಂದರ್ಭದಲ್ಲಿಯೇ ವಸಂತಾ ಹಠಾತ್ತನೆ ಹುಸೇನ್ ಸಾಗರ್ ಸರೋವರಕ್ಕೆ ಜಿಗಿದಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ವಸಂತಾ ಅವರ ಮೃತದೇಹವನ್ನು ನೀರಿನಿಂದ ಹೊರತೆಗೆದು, ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮಕ್ಕಳ ಬಳಿ ಇದ್ದ ಮೊಬೈಲ್ ಫೋನ್ ಮೂಲಕ ಕುಟುಂಬದವರನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿದೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

