ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿದ್ಯುತ್ ಕಳ್ಳತನದ ಬಗ್ಗೆ ನಿರಂತರ ದೂರುಗಳು ಕೇಳಿಬಂದ ಹಿನ್ನೆಲೆ, ಸಂಭಾಲ್ ಜಿಲ್ಲೆಯಲ್ಲಿ ಆಡಳಿತ ಮತ್ತು ಪೊಲೀಸರ ಜಂಟಿ ತಂಡ ಭಾರೀ ಕಾರ್ಯಾಚರಣೆ ನಡೆಸಿದೆ. ಮುಂಜಾನೆ ಆರಂಭವಾದ ಈ ದಾಳಿ ಭಾನುವಾರ ದಿನವಿಡೀ ಮುಂದುವರಿದಿದ್ದು, ಹಲವು ಪ್ರದೇಶಗಳಲ್ಲಿ ಅಕ್ರಮ ವಿದ್ಯುತ್ ಬಳಕೆಯನ್ನು ಪತ್ತೆಹಚ್ಚಿ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ.
ಡಿಎಂ ರಾಜೇಂದ್ರ ಪೆನ್ಸಿಯಾ ಮತ್ತು ಎಸ್‌ಪಿ ಕೆಕೆ ವಿಷ್ಣೋಯ್ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಗೆ ಭಾರೀ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ವಿದ್ಯುತ್ ಇಲಾಖೆ ಅಧಿಕಾರಿಗಳೂ ಸ್ಥಳದಲ್ಲೇ ಪರಿಶೀಲನೆ ನಡೆಸಿದ್ದಾರೆ. ವಿದ್ಯುತ್ ಕಳ್ಳತನಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಸಿದೆ.
ಇದನ್ನೂ ಓದಿ: FOOD | ಫ್ರಿಡ್ಜ್ ನಲ್ಲಿ ಎಲ್ಲಾ ತರಕಾರಿನೂ ಸ್ವಲ್ಪ ಸ್ವಲ್ಪ ಉಳಿದಿದ್ಯಾ? ಹಾಗಿದ್ರೆ ಈ ಸಾಂಬಾರ್ ಟ್ರೈ ಮಾಡಿ
ರಾಯ್ ಸತ್ತಿ ಹಾಗೂ ದೀಪ ಸರಾಯಿ ಪ್ರದೇಶಗಳಲ್ಲಿ ತಪಾಸಣೆ ನಡೆಸಿದ ಬಳಿಕ, ತಂಡ ಸರೈ ತರೀನ್ ಪ್ರದೇಶಕ್ಕೆ ತೆರಳಿ ಮನೆ–ಮನೆ ಪರಿಶೀಲನೆ ನಡೆಸಿತು. ಈ ವೇಳೆ ಅನೇಕ ಮನೆಗಳಲ್ಲಿ ಮೀಟರ್ ಇಲ್ಲದೆ ವಿದ್ಯುತ್ ಬಳಸುತ್ತಿರುವುದು ಹಾಗೂ ನೇರವಾಗಿ ಕಂಬಗಳಿಂದ ಅಕ್ರಮ ಸಂಪರ್ಕ ತೆಗೆದುಕೊಂಡಿರುವುದು ಪತ್ತೆಯಾಗಿದೆ. ಅಧಿಕಾರಿಗಳ ದಾಳಿಯಿಂದ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ತಪಾಸಣೆಯ ವೇಳೆ ಆಸಿಫ್ ಎಂಬ ವ್ಯಕ್ತಿಯ ಮೂರು ಮಹಡಿ ಮನೆಯಲ್ಲಿ ಭಾರೀ ಪ್ರಮಾಣದ ವಿದ್ಯುತ್ ಕಳ್ಳತನ ಬೆಳಕಿಗೆ ಬಂದಿದೆ. ಹೊರಗಿನ ಕಂಬದಿಂದ ಅಕ್ರಮ ಸಂಪರ್ಕ ಪಡೆದು, ಅದೇ ಮೂಲಕ ಹಲವು ಮನೆಗಳಿಗೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕವನ್ನು ತಕ್ಷಣವೇ ಕಡಿತಗೊಳಿಸಲಾಗಿದೆ.

