ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾಮರಾಜಪೇಟೆ ವಿಧಾನಸಭಾಕ್ಷೇತ್ರದ ಜೆ.ಜೆ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಓಂ ಶಕ್ತಿ ಮಾಲಾಧಾರಿಗಳ ಮೇಲೆ ನಡೆದ ಕಲ್ಲು ತೂರಾಟ ಘಟನೆಯಲ್ಲಿ ಗಾಯಗೊಂಡಿದ್ದ ಯುವತಿ ಮನೆಗೆ ಇಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್, ಸಂಸದ ಪಿ.ಸಿ.ಮೋಹನ್ ಭೇಟಿ ನೀಡಿ ಸಂತೈಸಿದರು.
ಜೆ.ಜೆ. ನಗರದ ಪಂಚಮುಖಿ ನಾಗದೇವತಾ ದೇವಸ್ಥಾನ ಬಳಿ ನಿನ್ನೆ ರಾತ್ರಿ ಓಂ ಶಕ್ತಿ ಮಾಲಾಧಾರಿಗಳು ಮೆರವಣಿಗೆ ಹೋಗುವಾಗ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರು. ಘಟನೆಯಲ್ಲಿ ಯುವತಿಗೆ ತಲೆಗೆ ಪೆಟ್ಟಾಗಿತ್ತು. ದುರ್ಘಟನೆ ಸಂಬಂಧ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೃತ್ಯ ಖಂಡಿಸಿ ಓಂ ಶಕ್ತಿ ಮಾಲಾಧಾರಿಗಳು ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದರು. ಪರಿಸ್ಥಿತಿ ಗಂಭೀರತೆ ಅರಿತು ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಬಂದ್ತೋಬಸ್ತ್ ಮಾಡಲಾಗಿತ್ತು. ಸದ್ಯ ಮೂವರು ಅಪ್ರಾಪ್ತರನ್ನ ವಶಕ್ಕೆ ಪಡೆದುಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಹೊಸ ದಾಖಲೆ: ಈ ಊರಲ್ಲಿ ಬೆಂಬಲಿಗರಿಂದ ನಾಟಿ ಕೋಳಿ ಔತಣ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇಂತಹ ಘಟನೆಗಳು ನಡೆಯುತ್ತಿರುವುದು ದುರದೃಷ್ಟಕರ. ಕೃತ್ಯವೆಸಗಿದ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಆಗ್ರಹಿಸಿದೆ.
ಈ ಸಂಬಂಧ ಗಾಯಾಳು ಯುವತಿ ಮನೆಗೆ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆರ್.ಅಶೋಕ್, ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ತಮಿಳುನಾಡಿನ ಓಂ ಶಕ್ತಿ ದೇವಸ್ಥಾನಕ್ಕೆ ತೆರಳುತ್ತಾರೆ. ಅದೇ ರೀತಿ ನಿನ್ನೆ ಪೂಜೆ ಮಾಡಿ ಮಾಲಾಧಾರಿಗಳು ದೇವಿಯ ಮೆರವಣಿಗೆ ಮಾಡುವಾಗ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇಂತಹ ಕೃತ್ಯವೆಸಗುವುದಕ್ಕಾಗಿಯೇ ಆರೋಪಿಗಳಿಗೆ ತರಬೇತಿ ನೀಡುವ ಜಾಲವಿದೆ ಎಂದು ಆರೋಪಿಸಿದರು.
ಯುವತಿ ಕಾಲೇಜು ವ್ಯಾಸಂಗ ಮಾಡುತ್ತಿದ್ದು, ಘಟನೆಯಿಂದ ಆತಂಕಗೊಂಡಿದ್ದಾಳೆ. ಯುವತಿಯ ಚಿಕಿತ್ಸೆಗೆ ನಾವು ಹಣಕಾಸಿನ ನೆರವು ನೀಡಲಿದ್ದೇವೆ. ಕಳೆದ ವರ್ಷದ ಚಾಮರಾಜಪೇಟೆಯ ಗಿರಿಪುರದಲ್ಲಿ ಹಸುವಿನ ಕೆಚ್ಚಲು ಕೂಯ್ದಿದ್ದರು. ಇಂತಹ ಘಟನೆಗಳ ಬಗ್ಗೆ ಪೊಲೀಸರು ಗಂಭೀರವಾಗಿ ಪರಿಗಣಿಸಬೇಕು. ಸರ್ಕಾರದ ಮೇಲೆ ನಮಗೆ ನಂಬಿಕೆಯಿಲ್ಲ. ಪೊಲೀಸರು ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.



