Saturday, January 10, 2026

ಬಾಂಗ್ಲಾದೇಶದಲ್ಲಿ ಮತ್ತೊಂದು ಕ್ರೌರ್ಯ: ಹಿಂದು ವಿಧವೆ ಮೇಲೆ ಸಾಮೂಹಿಕ ಅತ್ಯಾಚಾರ, ಮರಕ್ಕೆ ಕಟ್ಟಿಹಾಕಿ ಕೂದಲು ಕತ್ತರಿಸಿ ಹಲ್ಲೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯ ಮುಂದುವರಿದಿದ್ದು, ಇದೀಗ ಹಿಂದು ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಲ್ಲದೆ ಆಕೆಯನ್ನು ಮರಕ್ಕೆ ಕಟ್ಟಿ ಹಾಕಿ ಕೂದಲು ಕತ್ತರಿಸಿ ಕ್ರೌರ್ಯ ಮೆರೆಯಲಾಗಿದೆ. ಜತೆಗೆ ಈ ಕೃತ್ಯವನ್ನು ವಿಡಿಯೊ ಮಾಡಿ ವೈರಲ್‌ ಸೋಶಿಯಲ್‌ ಮೀಡಿಯಾದಲ್ಲಿ ಹರಿಯ ಬಿಡಲಾಗಿದೆ. ಮಧ್ಯ ಬಾಂಗ್ಲಾದೇಶದ ಝೆನೈದದ ಕಳಿಗಂಜ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.

ಬಾಂಗ್ಲಾದೇಶದ ಜೆನೈದಾ ಜಿಲ್ಲೆಯ ಕಲಿಗಂಜ್ ಉಪ-ಜಿಲ್ಲೆಯಲ್ಲಿ 40 ವರ್ಷದ ಹಿಂದು ವಿಧವೆಯೊಬ್ಬರ ಮೇಲೆ ಇಬ್ಬರು ದುಷ್ಕರ್ಮಿಗಳು ಅತ್ಯಾಚಾರ ಎಸಗಿದ್ದು ಮಾತ್ರವಲ್ಲದೇ ಆಕೆಯ ಕೂದಲನ್ನು ಕತ್ತರಿಸಿ, ಮರಕ್ಕೆ ಕಟ್ಟಿಹಾಕಿ, ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಈ ಬಗ್ಗೆ ಮಹಿಳೆ ದುರು ನೀಡಿದ್ದಾರೆ.

ದೂರಿನಲ್ಲಿ ಏನಿದೆ?
ಸಂತ್ರಸ್ತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಈ ಬಗ್ಗೆ ತನ್ನ ಮೇಲಾದ ದೌರ್ಜನ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ‘ಸುಮಾರು ಎರಡೂವರೆ ವರ್ಷದ ಹಿಂದೆ ಕಳಿಗಂಜ್‌ನ 7ನೇ ವಾರ್ಡ್‌ನಲ್ಲಿ 2 ಅಂತಸ್ತಿನ ಮನೆ ಇರುವ ಜಾಗವನ್ನು ಶಹೀನ್‌ ಮತ್ತು ಆತನ ಸಹೋದರನ ಬಳಿಯಿಂದ ಖರೀದಿಸಿದ್ದೆ. ಅದಾದ ಬಳಿಕ ಶಹೀನ್‌ ನನ್ನ ಬಳಿ ಅನುಚಿತವಾಗಿ ವರ್ತಿಸತೊಡಗಿದ. ಆತನ ಮಾತು ಕೇಳದಿದ್ದಾಗ ಕಿರುಕುಳ ನೀಡಲು ಆರಂಭಿಸಿದ’ ಎಂದು ಅವರು ಹೇಳಿದ್ದಾರೆ.

ಜನವರಿ 3ರಂದು ಸಂಜೆ ಶಹೀನ್‌ ಮತ್ತು ಆತ ಸಹಚರ ಹಸನ್‌ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ 50,000 ಟಕ (ಸುಮಾರು 37,000 ರುಪಾಯಿ) ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಹಣವನ್ನು ನೀಡಲು ಮಹಿಳೆ ನಿರಾಕರಿಸಿದ್ದಾರೆ. ಇದಕ್ಕಾಗಿ ಶಹೀನ್‌ ಮತ್ತು ಹಸನ್‌ ಮಹಿಳೆ ಮತ್ತು ಅವರ ಸಂಬಂಧಿಕರ ಮೇಲೆ ಹಲ್ಲೆ ನಡೆಸಿದ್ದಾರೆ. ಸಹಾಯಕ್ಕಾಗಿ ಕಿರುಚಿದಾಗ ಆಕೆಯನ್ನು ಮರಕ್ಕೆ ಕಟ್ಟಿಹಾಕಿ ಕೂದಲನ್ನು ಕತ್ತರಿಸಿ ಹಾಕಿದ್ದಾರೆ. ಅಷ್ಟೂ ಕೃತ್ಯವನ್ನು ರೆಕಾರ್ಡ್‌ ಮಾಡಿ ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹರಿಯಬಿಟ್ಟು ವಿಕೃತಿ ಮೆರೆದಿದ್ದಾರೆ.

ಇಷ್ಟಾಗಿಯೂ ಆಕೆಯ ಮೇಲೆ ದೌರ್ಜನ್ಯ ನಿಂತಿಲ್ಲ. ಕೊನೆಗೆ ಮಹಿಳೆ ಪ್ರಜ್ಞೆ ತಪ್ಪಿ ಬಿದ್ದುಬಿಟ್ಟಿದ್ದಾರೆ. ಬಳಿಕ ಶಹೀನ್‌ ಮತ್ತು ಹಸನ್‌ ಸ್ಥಳದಿಂದ ಹೊರಟು ಹೋಗಿದ್ದಾರೆ. ಮಹಿಳೆಯ ಸ್ಥಿತಿಯನ್ನು ಗಮನಿಸಿದ ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಮಹಿಳೆ ತನ್ನ ಮೇಲಾದ ದೌರ್ಜನ್ಯವನ್ನು ವಿವರಿಸಿ ದೂರು ನೀಡಿದ್ದಾರೆ. ಸದ್ಯ ಪ್ರಕರಣ ತನಿಖೆ ಆರಂಭವಾಗಿದ್ದು, ಅಪರಾಧಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!