Sunday, January 11, 2026

3 ವಾರಗಳಲ್ಲಿ 5ನೇ ದಾಳಿ: ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದು ವ್ಯಕ್ತಿಯ ಕೊಲೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದು ಯುವಕನೊಬ್ಬನನ್ನು ಸಾರ್ವಜನಿಕವಾಗಿ ಗುಂಡಿಕ್ಕಿ ಕೊಂದಿದ್ದಾರೆ. ಮಣಿರಾಮ್‌ಪುರದ ಉಪಜಿಲ್ಲಾದ ವಾರ್ಡ್ ಸಂಖ್ಯೆ 17 ರ ಕೊಪಾಲಿಯಾ ಬಜಾರ್‌ನಲ್ಲಿ ಸಂಜೆ 5:45 ರ ಸುಮಾರಿಗೆ ಈ ಘಟನೆ ನಡೆದಿದೆ. ಮೃತನನ್ನು ಕೇಶಬ್‌ಪುರ ಉಪಜಿಲ್ಲಾದ ಅರುವಾ ಗ್ರಾಮದ ನಿವಾಸಿ ತುಷಾರ್ ಕಾಂತಿ ಬೈರಾಗಿ ಅವರ ಪುತ್ರ ರಾಣಾ ಪ್ರತಾಪ್ (45) ಎಂದು ಗುರುತಿಸಲಾಗಿದೆ.

ದೀಪು ಚಂದ್ರ ದಾಸ್, ಅಮೃತ್ ಮಂಡಲ್ ಆಲಿಯಾಸ್‌ ಸಾಮ್ರಾಟ್‌, ಬಜೇಂದ್ರ ಬಿಸ್ವಾಸ್‌, ಖೋಕೋನ್‌ ದಾಸ್‌ ಬಳಿಕ ಇದೀಗ ಮತ್ತೊಬ್ಬ ಹಿಂದು ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ.

ಹಿಂದು ಪತ್ರಕರ್ತ 45 ವರ್ಷದ ರಾಣ ಪ್ರತಾಪ್‌ ಮೃತ ವ್ಯಕ್ತಿ. ಇವರು ಕಾರ್ಖಾನೆಯೊಂದರ ಮಾಲಕರಾಗಿದ್ದರು ಮತ್ತು ದಿನ ಪತ್ರಿಕೆಯೊಂದರ ಹಂಗಾಮಿ ಸಂಪಾದಕರಾಗಿದ್ದರು. ರಾಣ ಪ್ರತಾಪ್‌ ಅವರ ಮೇಲೆ ದುಷ್ಕರ್ಮಿಗಳ ಗುಂಪು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಜನವರಿ 5ರ ಸಂಜೆ 6 ಗಂಟೆ ಸುಮಾರಿಗೆ ನೈಋತ್ಯ ಬಾಂಗ್ಲಾದೇಶದ ಜಶೋರ್‌ನ ಮಣಿರಾಂಪುರ ಉಪ ಜಿಲ್ಲೆಯ ಕೊಪಾಲಿಯಾ ಬಜಾರ್‌ನಲ್ಲಿ ಪ್ರತಾಪ್ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ನಡೆದ ಐದನೇ ಹಿಂಸಾತ್ಮಕ ಘಟನೆ
ಬಾಂಗ್ಲಾದೇಶದ ಹಲವಾರು ಭಾಗಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಮತ್ತು ಹೆಚ್ಚಿದ ಉದ್ವಿಗ್ನತೆಯ ಮಧ್ಯೆ, ಕಳೆದ ಮೂರು ವಾರಗಳಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಐದನೇ ಹಿಂಸಾತ್ಮಕ ಘಟನೆ ಇದಾಗಿದೆ.

ಇದಕ್ಕೂ ಮೊದಲು, ಹೊಸ ವರ್ಷದ ಮುನ್ನಾದಿನದಂದು ಹಿಂದು ಉದ್ಯಮಿ ಖೋಕೋನ್ ಚಂದ್ರ ದಾಸ್ ಅವರನ್ನು ಗುಂಪೊಂದು ಇರಿದು ಬೆಂಕಿ ಹಚ್ಚಿತ್ತು. ಢಾಕಾದ ರಾಷ್ಟ್ರೀಯ ಸುಟ್ಟಗಾಯಗಳ ಸಂಸ್ಥೆಯಲ್ಲಿ ಸುಟ್ಟ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಅವರು ಶನಿವಾರ ಬೆಳಿಗ್ಗೆ ನಿಧನರಾದರು. ಶರಿಯತ್‌ಪುರ ಜಿಲ್ಲೆಯ ದಾಮುದ್ಯದ ಕೋನೇಶ್ವರ ಒಕ್ಕೂಟದ ಕುರ್ಭಂಗಾ ಬಜಾರ್ ಬಳಿ ಡಿಸೆಂಬರ್ 31 ರಂದು ಈ ದಾಳಿ ನಡೆದಿತ್ತು.

error: Content is protected !!