Friday, January 9, 2026

ಸಿದ್ದರಾಮಯ್ಯ ಆಡಳಿತಾವಧಿ ‘ದುರಾಡಳಿತದ ಕಾಲಘಟ್ಟ’: ಜೆಡಿಎಸ್ ಟೀಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದಲ್ಲಿ ಅತಿದೀರ್ಘಾವಧಿಯ ಮುಖ್ಯಮಂತ್ರಿ ಎಂಬ ದಾಖಲೆಯತ್ತ ಸಿದ್ದರಾಮಯ್ಯ ಸಾಗುತ್ತಿರುವ ಬೆನ್ನಲ್ಲೇ ಜೆಡಿಎಸ್ ಸರ್ಕಾರವನ್ನು ತೀವ್ರವಾಗಿ ಲೇವಡಿ ಮಾಡಿದೆ. ಸಿದ್ದರಾಮಯ್ಯ ಅವರ ಆಡಳಿತಾವಧಿಯನ್ನು “ದುರಾಡಳಿತದ ಕಾಲಘಟ್ಟ” ಎಂದು ಕರೆದ ಜೆಡಿಎಸ್, ಆರೋಪಗಳ ಪಟ್ಟಿ ಬಿಡುಗಡೆ ಮಾಡಿ ತಿರುಗೇಟು ನೀಡಿದೆ.

ಸಾಮಾಜಿಕ ಜಾಲತಾಣ Xನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ಸಿದ್ದರಾಮಯ್ಯ ಆಡಳಿತದ ಅವಧಿಯಲ್ಲಿ ರಾಜ್ಯದಲ್ಲಿ ಕೋಮುಗಲಭೆ ಹಾಗೂ ಹಿಂಸಾಚಾರ ಹೆಚ್ಚಾಗಿದೆ ಎಂದು ಆರೋಪಿಸಿದೆ. ರೈತರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚಳಗೊಂಡಿದೆ, ಭ್ರಷ್ಟಾಚಾರ ವಿಚಾರದಲ್ಲಿ ಕರ್ನಾಟಕ ರಾಷ್ಟ್ರಮಟ್ಟದಲ್ಲಿ ಮುಂಚೂಣಿಗೆ ಬಂದಿದೆ ಎಂದು ಹೇಳಿದೆ. ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಹಲವು ಶಾಸಕರು ಜೈಲು ಸೇರಿರುವುದನ್ನೂ ಉಲ್ಲೇಖಿಸಿದೆ.

ಇದನ್ನೂ ಓದಿ: FOOD |ಸಾಂಬಾರ್‌ ಯಾವುದೇ ಇರಲಿ, ಸೈಡ್‌ಡಿಶ್‌ ಆಲೂ ಜೀರಾ ಅದರ ರುಚಿ ಹೆಚ್ಚಿಸುತ್ತೆ

ವಾಲ್ಮೀಕಿ, ಭೋವಿ, ಅಂಬೇಡ್ಕರ್ ನಿಗಮಗಳ ಅನುದಾನ ಹಾಗೂ SCP/TSP ಯೋಜನೆಗಳ ಹಣ ದುರ್ಬಳಕೆ ಆರೋಪಗಳನ್ನು ಜೆಡಿಎಸ್ ಮುಂದಿಟ್ಟಿದೆ. ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಸಾವಿರಾರು ಕೋಟಿ ರೂಪಾಯಿ ಲೂಟಿಯಾಗಿದೆ ಎಂಬ ಆರೋಪವನ್ನೂ ಮಾಡಿದೆ.

ಇದಕ್ಕೂ ಹೊರತು, ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ಕಷ್ಟಕರವಾಗಿದೆ, ರಸ್ತೆ ಸಮಸ್ಯೆಗಳಿಂದ ಅನೇಕ ಪ್ರಾಣಹಾನಿ ಸಂಭವಿಸಿದೆ, ಸಮಾಜದಲ್ಲಿ ಜಾತಿ ಆಧಾರಿತ ಒಡಕು ಹೆಚ್ಚಾಗಿದೆ ಎಂದು ಜೆಡಿಎಸ್ ಆರೋಪಿಸಿದೆ. ಸಾಲದ ಹೊರೆ ಹೆಚ್ಚಿಸಿದ ಮುಖ್ಯಮಂತ್ರಿ ಎಂಬ ಟೀಕೆಯನ್ನೂ ಜೆಡಿಎಸ್ ತನ್ನ ಹೇಳಿಕೆಯಲ್ಲಿ ಸೇರಿಸಿದೆ.

error: Content is protected !!