ಹೊಸದಿಗಂತ ಡಿಜಿಟಲ್ ಡೆಸ್ಕ್:
2022 ರಲ್ಲಿ ನಡೆದ 19 ವರ್ಷದ ರೆಸಾರ್ಟ್ ಸ್ವಾಗತಕಾರಿಣಿ ಅಂಕಿತಾ ಭಂಡಾರಿ ಕೊಲೆ ಪ್ರಕರಣವನ್ನು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಶುಕ್ರವಾರ ಸಿಬಿಐ ತನಿಖೆಗೆ ಶಿಫಾರಸು ಮಾಡಿದೆ .
ಇತ್ತೀಚೆಗೆ ಅಂಕಿತಾ ಪೋಷಕರು ಧಾಮಿ ಅವರನ್ನು ಭೇಟಿಯಾಗಿ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಮನವಿ ಮಾಡಿದ್ದಾರೆ. ಅಂಕಿತಾ ಪೋಷಕರ ಭಾವನೆಗಳನ್ನು ಗೌರವಿಸಿ, ಉತ್ತರಾಖಂಡ ಸರ್ಕಾರ ಸಿಬಿಐ ತನಿಖೆಗೆ ಶಿಫಾರಸು ಮಾಡಿದೆ ಎಂದು ಧಾಮಿ ಘೋಷಿಸಿದ್ದಾರೆ.
ರಾಜ್ಯ ಸರ್ಕಾರದ ಉದ್ದೇಶ ಸಂಪೂರ್ಣವಾಗಿ ಸ್ಪಷ್ಟವಾಗಿದೆ ಮತ್ತು ಯಾವುದೇ ಸತ್ಯ ಅಥವಾ ಪುರಾವೆಗಳನ್ನು ಕಡೆಗಣಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.
ಅಂಕಿತಾ ಅವರ ತಂದೆ ವೀರೇಂದ್ರ ಸಿಂಗ್ ಭಂಡಾರಿ ಮತ್ತು ತಾಯಿ ಸೋನಿ ದೇವಿ ಅವರು ಬುಧವಾರ ರಾತ್ರಿ ಸಿಎಂ ಧಾಮಿ ಅವರನ್ನು ಭೇಟಿಯಾಗಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಕೇಂದ್ರ ತನಿಖಾ ಸಂಸ್ಥೆ(ಸಿಬಿಐ)ಯಿಂದ ಪ್ರಕರಣದ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದರು.
ನ್ಯಾಯವನ್ನು ಖಚಿತಪಡಿಸುವುದು ಸರ್ಕಾರದ ಉದ್ದೇಶವಾಗಿದೆ ಮತ್ತು ಪ್ರಕರಣ ತನಿಖೆ ಮುಂದುವರಿಯುತ್ತದೆ. ಅಂಕಿತಾ ಕೇವಲ ಬಲಿಪಶುವಲ್ಲ, ಅವರು ನಮ್ಮ ಸಹೋದರಿ ಮತ್ತು ಮಗಳು ಕೂಡ ಆಗಿದ್ದರು ಎಂದು ಧಾಮಿ ಹೇಳಿದ್ದಾರೆ.
2022 ರಲ್ಲಿ, ಪೌರಿಯ ವನಂತ್ರ ರೆಸಾರ್ಟ್‌ನಲ್ಲಿ ಸ್ವಾಗತಕಾರಿಣಿಯಾಗಿದ್ದ 19 ವರ್ಷದ ಅಂಕಿತಾ ಭಂಡಾರಿ ಅವರನ್ನು ಕೊಲೆ ಮಾಡಲಾಗಿತ್ತು. ಪ್ರಕರಣ ಸಂಬಂಧ ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ ಮತ್ತು ಅವರ ಇಬ್ಬರು ಉದ್ಯೋಗಿಗಳನ್ನು ಪೊಲೀಸರು ಬಂಧಿಸಿದ್ದರು ಮತ್ತು ಪ್ರಕರಣದಲ್ಲಿ ಮೂವರಿಗೂ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

