ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ಜಾತಿ–ಧರ್ಮ ಭೇದವಿಲ್ಲದೆ ಎಲ್ಲರಿಗೂ ಕೆಲಸ ಮಾಡುವ ಸಿದ್ಧಾಂತ ಹೊಂದಿರುವ ಪಕ್ಷವೇ ಹೊರತು, ಮುಸ್ಲಿಮರ ವಿರೋಧಿ ಅಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ನಾಗ್ಪುರ ಮಹಾನಗರ ಪಾಲಿಕೆ ಚುನಾವಣೆಯ ಹಿನ್ನೆಲೆಯಲ್ಲಿ ನಗರದಲ್ಲಿ ಪ್ರಚಾರ ನಡೆಸಿದ ಅವರು, ಬಿಜೆಪಿ–ಶಿವಸೇನೆ ಮೈತ್ರಿಕೂಟಕ್ಕೆ ಪೂರ್ಣ ಬಹುಮತ ಸಿಕ್ಕರೆ ನಾಗರಿಕರ ಕನಸುಗಳು ನನಸಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜನವರಿ 15ರಂದು ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ, ಆಯ್ಕೆಯಾದ ಅಭ್ಯರ್ಥಿಗಳ ಕಾರ್ಯಕ್ಷಮತೆಗೆ ತಾವೇ ಗ್ಯಾರಂಟಿ ಆಗಿರುತ್ತೇನೆ ಎಂದು ಗಡ್ಕರಿ ಹೇಳಿದರು. ಪಕ್ಷದ ಬಗ್ಗೆ ಹರಡಲಾಗುತ್ತಿರುವ ತಪ್ಪು ಕಲ್ಪನೆಗಳನ್ನು ನಿವಾರಿಸುವ ಉದ್ದೇಶದಿಂದ ಹಿರಿಯ ನಾಯಕರು ಸಾರ್ವಜನಿಕ ಸಭೆಗಳನ್ನು ನಡೆಸುತ್ತಿದ್ದಾರೆ ಎಂದೂ ಹೇಳಿದರು.
ಇದನ್ನೂ ಓದಿ: FOOD | ಕಲರ್ ಫುಲ್ ಪಾಲಕ್ ಪೂರಿ ತಿಂದಿದ್ದೀರಾ? ರೆಸಿಪಿ ಇಲ್ಲಿದೆ
“ನಾವು ಮುಸ್ಲಿಮರ ವಿರೋಧಿಗಳಲ್ಲ. ನಮ್ಮ ಹೋರಾಟ ಭಯೋತ್ಪಾದನೆ ಮತ್ತು ಪಾಕಿಸ್ತಾನದ ವಿರುದ್ಧ. ದೇಶಕ್ಕಾಗಿ ತ್ಯಾಗ ಮಾಡುವ ಮುಸ್ಲಿಮರು ನಮಗೂ ಹಿಂದೂಗಳಷ್ಟು ಪ್ರಿಯರು. ಯಾರೇ ಮಸೀದಿ, ದೇವಸ್ಥಾನ, ಗುರುದ್ವಾರ ಅಥವಾ ಬೌದ್ಧ ವಿಹಾರಕ್ಕೆ ಹೋಗಲಿ, ನಮ್ಮ ರಕ್ತ ಒಂದೇ. ನಾವು ಮೊದಲು ಭಾರತೀಯರು” ಎಂದು ಗಡ್ಕರಿ ಹೇಳಿದರು.

